ಸ್ಲೊವೇನಿಯನ್ ದೇಶದ 22 ವರ್ಷದ ಯುವತಿಯೊಬ್ಬಳು, ವಿಮೆ ಮೊತ್ತವನ್ನು ಕ್ಲೈಮ್ ಮಾಡುವ ಉದ್ದೇಶದಿಂದ ಕೈಯನ್ನು ಕತ್ತರಿಸಿಕೊಂಡ ಘಟನೆ ನಡೆದಿದ್ದು, ಇದೀಗ ವಿಮಾ ಕಂಪನಿಗೆ ವಂಚನೆ ಮಾಡಿರುವ ಆರೋಪದಲ್ಲಿ ಯುವತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸ್ಲೊವೇನಿಯನ್ ಲುಬ್ಲಜಾನಾ ಜಿಲ್ಲಾ ಕೋರ್ಟ್ ಈ ಆದೇಶವನ್ನು ಹೊರಡಿಸಿದೆ. 2019ರಲ್ಲಿ ಯುವತಿಯೊಬ್ಬಳು ತಮ್ಮ ಮನೆಯಲ್ಲಿ ಗರಗಸದಿಂದ ಮರ ಕತ್ತರಿಸುವಾಗ ಕೈ ಕತ್ತರಿಸಿ ಹೋಗಿದೆ ಎಂದು ಆರು ವಿಮಾ ಕಂಪನಿಗಳಿಂದ ವಿಮಾ ಮೊತ್ತ ಪಡೆಯಲು ಮುಂದಾಗಿದ್ದಳು.
ಈ ವಿಮಾ ಮೊತ್ತ ಒಂದು ಮಿಲಿಯನ್ ಯೂರೋ ಆಗಿತ್ತು. ಆದರೆ ಯುವತಿಯ ನಡವಳಿಕೆ ನೋಡಿ ಸ್ಥಳೀಯ ಪೊಲೀಸರು ತನಿಖೆ ನಡೆಸಿದಾಗ, ಇದೊಂದು ವ್ಯವಸ್ಥಿತ ಸಂಚು ಎನ್ನುವುದು ತಿಳಿದುಬಂದಿದೆ.
ಯುವತಿಯ ಪ್ರಿಯತಮ ಈ ವಂಚನೆಗೆ ಕುಮ್ಮಕ್ಕು ನೀಡಿದ್ದ. ಆದ್ದರಿಂದ ಆತನಿಗೆ ಮೂರು ವರ್ಷ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದೆ. ಯುವತಿಯ ಕತ್ತರಿಸಿದ ಕೈಯನ್ನು ಆಸ್ಪತ್ರೆಗೆ ತಗೆದುಕೊಂಡು ಹೋಗುವ ಮುನ್ನಾ ದಿನ ಇಬ್ಬರು ಕೃತಕ ಕೈ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ಗೂಗಲ್ ಮಾಡಿದ್ದರಂತೆ.
ಈ ಎಲ್ಲವನ್ನು ನೋಡಿದ ಪೊಲೀಸರು ಇದೊಂದು ವಂಚನೆ ಪ್ರಕರಣವೆಂದು ಪರಿಗಣಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆರಂಭದಲ್ಲಿ ಯುವತಿ ತನ್ನ ತಪ್ಪಿಲ್ಲವೆಂದರೂ, ಪೊಲೀಸರು ಅಗತ್ಯ ದಾಖಲೆ ನೀಡಿರುವುದರಿಂದ ಶಿಕ್ಷೆ ಪ್ರಕಟಿಸಿದೆ.