
ಪ್ರಧಾನ ಮಂತ್ರಿಯನ್ನು ಅವಹೇಳನ ಮಾಡಿದ್ದಕ್ಕೆ ಡ್ಯಾಮೇಜ್ ಪರಿಹಾರದ ರೂಪದಲ್ಲಿ ಪಾವತಿ ಮಾಡಬೇಕಿದ್ದ $100,000 ಗಳನ್ನು ಜನರಿಂದ ಸಂಗ್ರಹಿಸಿ ಕೊಟ್ಟಿದ್ದಾಗಿ ಸಿಂಗಪುರದ ಬ್ಲಾಗರ್ ಒಬ್ಬರು ತಿಳಿಸಿದ್ದಾರೆ.
ಲೆಯಾಂಗ್ ಶೇ ಹಿಯಾನ್ ಹೆಸರಿನ ಈ ವ್ಯಕ್ತಿ ಫೇಸ್ಬುಕ್ ಪೋಸ್ಟ್ ಒಂದರ ಮೂಲಕ ಅಂಕಣವೊಂದನ್ನು ಶೇರ್ ಮಾಡಿದ್ದರು. ಮಲೇಷ್ಯನ್ ಸುದ್ದಿ ಪೋರ್ಟಲ್‌ನಲ್ಲಿ ಬಿತ್ತರಗೊಂಡಿದ್ದ ಅಂಕಣವನ್ನು ಲೆಯಾಂಗ್ ಶೇರ್ ಮಾಡಿದ್ದರು. ಮಲೇಷ್ಯಾದಲ್ಲಿ ಭಾರೀ ಪ್ರಮಾಣದ ಆರ್ಥಿಕ ಅಕ್ರಮದಲ್ಲಿ ಭಾಗಿಯಾಗಿರುವ ಸಂಬಂಧ ಲೀ ಅವರ ಮೇಲೆ ತನಿಖಾಧಿಕಾರಿಗಳ ಕಣ್ಣು ಬಿದ್ದಿದೆ ಎಂದು ಅಂಕಣದಲ್ಲಿ ಬರೆಯಲಾಗಿತ್ತು.
ಮಲೇಷ್ಯಾದ ಮಾಜಿ ಪ್ರಧಾನಿ ನಜೀಬ್ ರಜಾಕ್ ಹೆಸರೂ ಕೇಳಿ ಬಂದಿದ್ದ ಹೂಡಿಕೆ ಕಾಂಡವೊಂದರಲ್ಲಿ ಶತಕೋಟಿಗಟ್ಟಲೇ ಡಾಲರ್‌ಗಳನ್ನು ಲೂಟಿ ಮಾಡಲಾಗಿತ್ತು.
ಹೈಸ್ಕೂಲ್ ಪಾಸಾದವರಿಗೂ ಉದ್ಯೋಗ ನೀಡಲು ಮುಂದಾದ ಟೆಸ್ಲಾ
ಫೇಸ್ಬುಕ್‌ನಲ್ಲಿ ಶೇರ್ ಮಾಡಿದ ಈ ಅಂಕಣಕ್ಕಾಗಿ ಲೆಯಾಂಗ್‌ರನ್ನು ಕೋರ್ಟ್ ಕಟಕಟೆಗೆ ಎಳೆದ ಲೀ, ಬ್ಲಾಗರ್ ವಿರುದ್ಧದ ಪ್ರಕರಣದಲ್ಲಿ ಗೆದಿದ್ದಾರೆ. ಪರಿಹಾರದ ರೂಪದಲ್ಲಿ ಪ್ರಧಾನಿಗೆ 133,000 ಸಿಂಗಪುರ ಡಾಲರ್‌ಗಳನ್ನು (100,000 ಅಮೆರಿಕ ಡಾಲರ್) ಪರಿಹಾರದ ರೂಪದಲ್ಲಿ ಕೊಡುವಂತೆ ಲೆಯಾಂಗ್‌ಗೆ ಕೋರ್ಟ್ ಸೂಚಿಸಿದೆ.
ಇದಾದ ಬೆನ್ನಿಗೆ ಸಾರ್ವಜನಿಕರಿಂದ ಹಣ ಕ್ರೋಢೀಕರಿಸುವ ಅಭಿಯಾನ ಹಮ್ಮಿಕೊಂಡ ಲೆಯಾಂಗ್ 11 ದಿನಗಳ ಅವಧಿಯಲ್ಲಿ 2,000ಕ್ಕೂ ಹೆಚ್ಚು ಮಂದಿಯಿಂದ ಪರಿಹಾರದ ಅಷ್ಟೂ ಮೊತ್ತ ಸಂಗ್ರಹಿಸಿಕೊಟ್ಟಿದ್ದಾರೆ.