ಕೊರೊನಾ ವೈರಸ್ ಸೋಂಕಿನ ನಡುವೆಯೇ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ದಂಪತಿಗಳಿಗೆ ಆರ್ಥಿಕ ನೆರವು ನೀಡಲು ಸಿಂಗಪುರ ಸರ್ಕಾರ ಮುಂದಾಗಿದೆ. ಕೋವಿಡ್-19 ಉಂಟು ಮಾಡಿರುವ ಆರ್ಥಿಕ ಮುಗ್ಗಟ್ಟಿನಿಂದ ತತ್ತರಿಸುತ್ತಿರುವ ಜನರಿಗೆ ಈ ಪ್ರೋತ್ಸಾಹ ಧನದ ಭರವಸೆಯನ್ನು ಅಲ್ಲಿನ ಉಪ ಪ್ರಧಾನಿ ನೀಡಿದ್ದಾರೆ.
“ಕೋವಿಡ್-19 ಕಾರಣದಿಂದಾಗಿ ಮಗು ಮಾಡಿಕೊಳ್ಳುವ ತಮ್ಮ ಯೋಜನೆಗಳನ್ನು ದಂಪತಿಗಳು ಮುಂದೂಡುತ್ತಿದ್ದಾರೆ ಎಂದು ನಮಗೆ ತಿಳಿದುಬಂದಿದೆ. ಆದಾಯದ ವಿಚಾರವಾಗಿ ಅನಿಶ್ಚಿತತೆ ಇದ್ದಲ್ಲಿ ಇವೆಲ್ಲಾ ಅರ್ಥವಾಗುವಂಥವೇ” ಎಂದು ಉಪ ಪ್ರಧಾನಿ ಹೆಂಗ್ ಸ್ವೀ ಕೀಟ್ ತಿಳಿಸಿದ್ದಾರೆ.
ಕೊರೊನಾ ತಂದಿಟ್ಟಿರುವ ಆರ್ಥಿಕ ಮುಗ್ಗಟ್ಟಿನ ಕಾರಣದಿಂದ ಪ್ರಸಕ್ತ ವಿತ್ತೀಯ ವರ್ಷದ ಎರಡನೇ ತ್ರೈಮಾಸಿಕದ ಜಿಡಿಪಿ ವೃದ್ಧಿಯು 12.6%ನಷ್ಟು ತಗ್ಗಿದೆ. ಜಗತ್ತಿನಲ್ಲೇ ಅತ್ಯಂತ ಕಡಿಮೆ ಜನನ ಪ್ರಮಾಣ ಹೊಂದಿರುವ ದೇಶಗಳಲ್ಲಿ ಒಂದಾದ ಸಿಂಗಪುರದಲ್ಲಿ ಅಲ್ಲಿನ ಆಡಳಿತಗಳು ಈ ಟ್ರೆಂಡ್‌ಗೆ ಅಂತ್ಯ ಹಾಡಲು ಯತ್ನಿಸುತ್ತಲೇ ಇವೆ.