ಫೇಸ್ಬುಕ್ ನಲ್ಲಿ ನಿಮಗೆ ಬರುವ ಇಲ್ಲವೇ ನೀವು ಕಳುಹಿಸುವ ಫ್ರೆಂಡ್ ರಿಕ್ವೆಸ್ಟ್ಗಳು ನಿಮಗೆ ಎಷ್ಟು ಮುಖ್ಯ..? ಅದರಲ್ಲೂ ನಿಮ್ಮ ಸ್ನೇಹಿತರೋ ಇಲ್ಲವೇ ಕುಟುಂಬಸ್ಥರು ನಿಮ್ಮ ವಿನಂತಿಯನ್ನ ನಿರಾಕರಿಸಿದ್ರೆ ಅಬ್ಬಬ್ಬಾ ಅಂದ್ರೆ ನೀವು ಏನು ಮಾಡಬಹುದು?
ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ಗಳನ್ನ ಒಪ್ಪಿಕೊಳ್ಳೋದು ಅಥವಾ ತಿರಸ್ಕರಿಸೋದು ತೀರಾ ಸಾಮಾನ್ಯ ವಿಚಾರವಾಗಿದೆ. ಆದರೆ ಆಘಾತಕಾರಿ ವಿಚಾರ ಏನಂದ್ರೆ ಅಮೆರಿಕದ ಉತ್ತರ ಡಕೋಟಾದ ವ್ಯಕ್ತಿಯೊಬ್ಬ ತನ್ನ ಮಾಜಿ ಬಾಸ್ ಫೇಸ್ಬುಕ್ನಲ್ಲಿ ಫ್ರೆಂಡ್ ರಿಕ್ವೆಸ್ಟ್ ಒಪ್ಪಿಕೊಂಡಿಲ್ಲ ಎಂಬ ಕಾರಣಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ..!
29 ವರ್ಷದ ಕ್ಯಾಲೆಬ್ ಬುರ್ಜೈಕ್ ಎಂಬಾತ ತನ್ನ ಮಾಜಿ ಬಾಸ್ನ್ನ ಮನೆಗೆ ತೆರಳಿದ್ದು ಮಾತ್ರವಲ್ಲದೇ ಮುಂಬಾಗಿಲನ್ನ ಕಾಲಿನಿಂದ ಒದ್ದಿದ್ದಾನೆ. 2 ದಿನಗಳವರೆಗೂ ತನ್ನ ವಿನಂತಿಯನ್ನ ಒಪ್ಪಿಕೊಳ್ಳದ ಕಾರಣ ನಿಮ್ಮನ್ನ ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಈ ರೀತಿ ಮಾಡೋದಕ್ಕೂ ಮುನ್ನ ಈ ಪುಣ್ಯಾತ್ಮ ನಿಮ್ಮ ಮನೆಯ ಬಾಗಿಲನ್ನ ಒಡೆಯುತ್ತೇನೆ ಅಂತಲೂ ಪೋಸ್ಟ್ ಹಾಕಿದ್ದ ಎನ್ನಲಾಗಿದೆ.
ಈ ಆಘಾತಕಾರಿ ಘಟನೆ ಬಳಿಕ ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ. ಯಾರದ್ದಾದರೂ ಫೇಸ್ಬುಕ್ ಫ್ರೆಂಡ್ ರಿಕ್ವೆಸ್ಟ್ ತಿರಸ್ಕರಿಸುವ ಮುನ್ನ ಎಚ್ಚರವಾಗಿರೋದು ಒಳಿತು.