ಧೂಮಪಾನ ಆರೋಗ್ಯಕ್ಕೆ ಹಾನಿಕರ. ಧೂಮಪಾನದಿಂದ ಕ್ಯಾನ್ಸರ್ ಸಂಭವಿಸುತ್ತದೆ. ಒಮ್ಮೊಮ್ಮೆ ಇದು ನಿಮ್ಮ ಚರ್ಮದ ಬಣ್ಣವನ್ನ ಹಳದಿ ಬಣ್ಣಕ್ಕೆ ತಿರುಗಿಸುತ್ತದೆ.
ಕೊನೆಯ ವಾಕ್ಯವನ್ನ ಓದಿ ಗೊಂದಲ ಉಂಟಾಯ್ತೇ..? ಆದರೆ ವಿಚಿತ್ರ ಅನ್ನಿಸಿದ್ರೂ ಈ ಮಾತು ಕೂಡ ಸತ್ಯ. ಸತತ ಧೂಮಪಾನದಿಂದ ವೃದ್ಧನೊಬ್ಬನ ಪಿತ್ತರಸದ ನಾಳಗಳಲ್ಲಿ ಗಡ್ಡೆ ರೂಪುಗೊಂಡಿದ್ದು ಇದರಿಂದ ಆತನ ಚರ್ಮದ ಬಣ್ಣ ಹಳದಿಯಾಗಿದೆ.
ಚೀನಾದ 60 ವರ್ಷದ ವೃದ್ಧನ ಚರ್ಮ ಹಳದಿ ಬಣ್ಣಕ್ಕೆ ತಿರುಗಿದ್ದು ಮಾತ್ರವಲ್ಲದೇ ಅನಾರೋಗ್ಯ ಉಂಟಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾನೆ. ವೈದ್ಯರ ನೀಡಿರುವ ಮಾಹಿತಿ ಪ್ರಕಾರ ಇದೊಂದು ಅಪರೂಪದ ಪ್ರಕರಣವಾಗಿದೆ. ಈತನ ಚರ್ಮ ಹಳದಿ ಬಣ್ಣಕ್ಕೆ ತಿರುಗಿರೋದನ್ನ ಕಂಡು ಒಂದು ಕ್ಷಣ ವೈದ್ಯರೇ ಶಾಕ್ ಆಗಿದ್ದಾರೆ.
ವಿವಿಧ ಪರೀಕ್ಷೆಗಳ ಬಳಿಕ ಈತನ ಪಿತ್ತರಸ ನಾಳ ಹಾಗೂ ಮೆದೋಜೀರಕ ಗ್ರಂಥಿಗಳಲ್ಲಿ ಗಡ್ಡೆ ಉಂಟಾಗಿದೆ ಎಂಬ ವಿಚಾರ ತಿಳಿದಿದೆ. ಈ ಕಾರಣದಿಂದಾಗಿ ಈತನಿಗೆ ಜಾಂಡೀಸ್ ಕೂಡ ಬಂದಿದೆ. ಅತಿಯಾದ ಧೂಮಪಾನದಿಂದ ಈ ವೃದ್ಧನಿಗೆ ಈ ಗಂಭೀರ ಪರಿಣಾಮ ಎದುರಿಸುವಂತಾಗಿದೆ. ಗಡ್ಡೆ ಶಸ್ತ್ರ ಚಿಕಿತ್ಸೆ ಬಳಿಕ ವೃದ್ಧ ಧೂಮಪಾನವನ್ನ ತ್ಯಜಿಸಿದ್ರೆ ಬದುಕುಳಿಯುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.