ಪೆನ್, ಲಾಕೆಟ್ ಮುಂತಾದವುಗಳ ಮೇಲೆ ಕ್ಯಾಮರಾ ಇಟ್ಟು ಕುಟುಕು(ಸ್ಟಿಂಗ್) ಕಾರ್ಯಾಚರಣೆ ನಡೆಸುವುದನ್ನು ಕೇಳಿದ್ದೇವೆ. ಪಕ್ಷಿಗಳ ಕಾಲಿಗೆ ಕ್ಯಾಮರಾ ಕಟ್ಟಿ ಗುಪ್ತಚರ ಇಲಾಖೆಗಳು ಬೇರೆ ದೇಶಗಳ ರಹಸ್ಯ ತಿಳಿದುಕೊಳ್ಳುವುದನ್ನೂ ಕೇಳಿದ್ದೇವೆ. ಆದರೆ, ಈಗ ಜೀರುಂಡೆಯಂಥ ಸಣ್ಣ ಕೀಟವೂ ಕ್ಯಾಮರಾ ಹೊತ್ತು ತಂದು ನಿಮ್ಮ ರಹಸ್ಯ ಬಯಲು ಮಾಡಬಹುದು ಎಚ್ಚರ!!
ಹೌದು, ಜೀರುಂಡೆ ಅಥವಾ ರೆಕ್ಕೆ ಹುಳು ಎಂದು ಕರೆಯುವ ಕೀಟವೂ ಹೊತ್ತೊಯ್ಯಬಹುದಾದಷ್ಟು ಕೇವಲ 250 ಮಿಲಿ ಗ್ರಾಂನಷ್ಟು ತೂಕದ ಪುಟ್ಟ ಕ್ಯಾಮರಾವನ್ನು ಅಮೇರಿಕಾದ ವಾಶಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಅದು ಸೈನ್ಸ್ ರೋಬೊಟಿಕ್ಸ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.
ಕ್ಯಾಮರಾದ ಫೋಟೋದ ಗುಣಮಟ್ಟ ಕಡಿಮೆ ಇರುತ್ತದೆ. ಕಪ್ಪು ಬಿಳುಪಿನ ವಿಡಿಯೋ ಮಾಡಬಹುದಾಗಿದೆ. ಸಮೀಪದ ಸ್ಮಾರ್ಟ್ ಫೋನ್ ನಲ್ಲಿ ಇದು ಪ್ಲೇ ಆಗಲಿದೆ. ಬ್ಯಾಟರಿ ಉಳಿಸುವ ದೃಷ್ಟಿಯಿಂದ ಡಿವೈಸ್ ನಲ್ಲಿ ಎಕ್ಸ್ ಲಮೇಟರ್ ಅನ್ನು ಸಹ ಕೂರಿಸಲಾಗಿದೆ. ಕೀಟ ಸಂಚರಿಸುತ್ತಿರುವಾಗ ಮಾತ್ರ ಕ್ಯಾಮರಾ ಫೋಟೋ ತೆಗೆಯುತ್ತದೆ. ಒಮ್ಮೆ ಚಾರ್ಜ್ ಮಾಡಿದರೆ 6 ತಾಸಿನವರೆಗೂ ಕ್ಯಾಮರಾವನ್ನು ಬಳಸಬಹುದಾಗಿದೆ.
ಸಂಶೋಧನೆಯ ಹಿರಿಯ ಕತೃ ಶ್ಯಾಮ್ ಗೊಲ್ಲಕೊಟಾ, “ಜನ ಸಮಸ್ಯೆಯ ಬಗ್ಗೆ ಜ್ಞಾನ ಹೊಂದಿದ್ದಾರೆ. ಅದಕ್ಕೆ ಪರಿಹಾರವನ್ನೂ ಕಂಡುಕೊಳ್ಳುತ್ತಾರೆ. ಇದ್ದ ವಿಷಯವನ್ನು ಸಾರ್ವಜನಿಕ ವಲಯದಲ್ಲಿ ಇಡಬೇಕು ಎಂಬುದು ಸಂಶೋಧಕರ ನಂಬಿಕೆ” ಎಂದು ಹೇಳಿದ್ದಾರೆ.