ಮನುಷ್ಯನ ದೇಹದೊಳಗಿರುವ ಜೀವಕೋಶಗಳು ವಿಭಜನೆ ಹೊಂದುತ್ತಲೇ ಇರುತ್ತವೆ. ಈ ನೈಸರ್ಗಿಕ ಪ್ರಕ್ರಿಯೆ ನಿಂತು ಹೋದರೆ, ಅಂತಹ ಜೀವಕೋಶಗಳು ಸಾಯುವುದಲ್ಲದೆ, ಮಾರಕ ಕ್ಯಾನ್ಸರ್ ಕಾರಕ ಆಗುವ ಅಪಾಯವೂ ಇದೆ. ಹೀಗಾಗಿ ಜೀವಕೋಶಗಳ ಬೆಳವಣಿಗೆ ಹಾಗೂ ನಿರಂತರ ವಿಭಜನೆಗೆ ಅನುಕೂಲ ಆಗುವಂತೆ ವಿಜ್ಞಾನಿಗಳು ಸಂಶೋಧನಾನಿರತರಾಗಿದ್ದಾರೆ.
ಡಿಎನ್ಎ ರಚನೆಯ ಅಂತ್ಯದಲ್ಲಿರುವ ಟೆಲೋಮರ್ ನಲ್ಲಿನ ವರ್ಣತಂತುಗಳು ರಕ್ಷಣಾ ಕವಚದಂತೆ ಕೆಲಸ ಮಾಡುತ್ತಿರುತ್ತವೆ. ಜೀವಕೋಶಗಳು ವಿಭಜನೆ ಹೊಂದುವ ಸಮಯದಲ್ಲಿ ಟೆಲೋಮರ್ ಗಳು ಚಿಕ್ಕದಾಗುತ್ತಾ ಹೋಗುತ್ತವೆ. ರಕ್ಷಣಾ ಕವಚದಂತಹ ವರ್ಣತಂತುಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಡಿಎನ್ಎ ರಚನೆಯಲ್ಲಿನ ಟೆಲೋಮರ್, ವರ್ಣತಂತುಗಳ ಬೆಳವಣಿಗೆ ಸರಿಯಾಗಿ ಆಗದಿದ್ದರೆ, ಜೀವಕೋಶಗಳ ವಿಭಜನೆಯೂ ನಿಲ್ಲುವುದಲ್ಲದೆ, ಜೀವಕೋಶಗಳಿಗೆ ವಯಸ್ಸಾದಂತೆ ಸಾಯುತ್ತವೆ. ಸತ್ತ ಜೀವಕೋಶಗಳಲ್ಲಿ ಕ್ಯಾನ್ಸರ್ ಕಾರಕ ಕೋಶಗಳು ಹುಟ್ಟಿಕೊಳ್ಳುತ್ತವೆ.
ಇದಕ್ಕಾಗಿ ಆರ್‌ಎನ್‌ಎ ಮೂಲಕ ಟೆಲೋಮರಿಕ್ ರಿಪೀಟ್ ಕಂಟೈನಿಂಗ್ (ಟೆರ್ರಾ) ಎಂಬ ಜೀವಾಣುವನ್ನು ವಿಜ್ಞಾನಿಗಳು ಆವಿಷ್ಕರಿಸಿದ್ದು, ಇದನ್ನು ಡಿಎನ್ಎ ಮೂಲಕ ಟೆಲೋಮರ್, ವರ್ಣತಂತುವಿಗೆ ಸಂಪರ್ಕಿಸುವ ಮುಖಾಂತರ ಜೀವಕೋಶಗಳ ವಿಭಜನೆ ಹಾಗೂ ಬೆಳವಣಿಗೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳುವ ತಂತ್ರಜ್ಞಾನವನ್ನು ಸಂಶೋಧಿಸಿದ್ದಾರೆ. ನಂತರ ಇದು ಪ್ರೊಟೀನ್ ಆಗಿಯೂ ಕಾರ್ಯ ನಿರ್ವಹಿಸಲಿದೆ. ಒಂದರ್ಥದಲ್ಲಿ ಇದನ್ನು ಡಿಎನ್ಎ- ಆರ್‌ಎನ್‌ಎ ಹೈಬ್ರೀಡ್ ಜೀವಾಣು ಎನ್ನಬಹುದು.