ಸೊಳ್ಳೆಗಳು ರೋಗ ಹರಡಿ ಪ್ರತಿ ವರ್ಷ ಲಕ್ಷಾಂತರ ಜನ ಸಾವನ್ನಪ್ಪುತ್ತಾರೆ. ಡೆಂಗ್ಯು, ಚಿಕುನ್ ಗುನ್ಯಾ, ಹಳದಿ ಕಾಮಾಲೆ ಸೇರಿ ಹಲವು ರೋಗಗಳಿಗೆ ಮಾರಕ ಸೊಳ್ಳೆಗಳೇ ಕಾರಣ. ರೋಗಗಳ ನಿವಾರಣೆಗೆ ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಆದರೆ, ಅದಕ್ಕಾಗಿ ಅವರು ತೆಗೆದುಕೊಳ್ತಿರೋ ರಿಸ್ಕ್ ಕೇಳಿದ್ರೆ ದಂಗಾಗ್ತೀರ.
ಕೀಟ ಶಾಸ್ತ್ರಜ್ಞ ಪೆರಾನ್ ರೋಸ್ ಅವರು ಟ್ವಿಟರ್ ನಲ್ಲಿ ಜಿಫ್ ವಿಡಿಯೋ ಹಾಗೂ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ನಮಗೆ ನಾಲ್ಕೈದು ಸೊಳ್ಳೆ ಕಚ್ಚಿದರೇ ತುರಿಕೆ ತಡೆದುಕೊಳ್ಳಲಾಗುವುದಿಲ್ಲ. ಆದರೆ, ಅವರು ತಮ್ಮ ಎಡಗೈಗೆ ಒಮ್ಮೆಲೆ 250 ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅವುಗಳಿಗೆ ರಕ್ತ ಕುಡಿಸ್ತಾರೆ.!!
ವಿಜ್ಞಾನಿಗಳು ಸೊಳ್ಳೆಗಳ ಬಗ್ಗೆ ಅಧ್ಯಯನ ಮಾಡಲು ಅವುಗಳ ಮೊಟ್ಟೆಗಳಿಗೆ ವೊಲ್ಬಾಸಿಯಾ ಎಂಬ ಬ್ಯಾಕ್ಟೀರಿಯ ಇಂಜಕ್ಟ್ ಮಾಡುತ್ತಾರೆ. ಆದರೆ, ಡೆಂಗ್ಯು ತರುವ ಈಡೀಸ್ ಇಜಿಪ್ಟೈ ಸೊಳ್ಳೆಯ ಮೊಟ್ಟೆಗಳು ಸಣ್ಣದಿರುತ್ತವೆ. ಪ್ರಯೋಗ ಮಾಡುವಾಗ ಅವುಗಳು ಹಾಳಾಗಿಬಿಡುತ್ತವೆ. ಇದರಿಂದ ಸೊಳ್ಳೆಗಳಿಗೆ ಹೆಚ್ಚು ರಕ್ತ ಕುಡಿಸಿ ಹೆಚ್ಚು ಮೊಟ್ಟೆ ಇಡುವಂತೆ ಮಾಡಲಾಗುತ್ತದೆ. ಅದಕ್ಕೆ ಸ್ವತಃ ವಿಜ್ಞಾನಿಗಳೇ ಸೊಳ್ಳೆಗಳಿಗೆ ರಕ್ತದಾನ ಮಾಡುತ್ತಾರೆ. ಒಂದು ಬ್ಯಾಚ್ ನಲ್ಲಿ 250 ರಂತೆ ಪ್ರತಿ ದಿನ ಸಾವಿರಕ್ಕೂ ಅಧಿಕ ಸೊಳ್ಳೆಗಳಿಗೆ ಅವರು ರಕ್ತ ಕುಡಿಸ್ತಾರೆ.