ನಿಮಗೆ ಬಾಲ್ಯದಲ್ಲಿ ಹುಷಾರಿಲ್ಲದಾಗ ಮಾತ್ರೆ ಅಥವಾ ಔಷಧಿ ತಿನ್ನದಿದ್ದರೆ ಅಮ್ಮ ಅಥವಾ ಅಜ್ಜಿ ರಮಿಸಿ ಜೇನುತುಪ್ಪ ಬಾಯಿಗೆ ಸವರುವುದು ನೆನಪಿದೆಯಾ…? ಅಮ್ಮ ಅಥವಾ ಅಜ್ಜಿಯ ಈ ಔಷಧಿಗೆ ಈಗ ವಿಶ್ವ ಮಾನ್ಯತೆ ಲಭಿಸಿದೆ. ಜೇನು ತುಪ್ಪ ಉತ್ತಮ ಔಷಧಿ ಎಂಬುದು ಅಧ್ಯಯನದಿಂದ ಸಾಬೀತಾಗಿದೆ.
ಇಂಗ್ಲೆಂಡ್ ನ ಆಕ್ಸ್‌ಫರ್ಡ್ ವಿಶ್ವ ವಿದ್ಯಾಲಯದ ಪ್ರಾಥಮಿಕ ಆರೋಗ್ಯ ಕಾಳಜಿ ವಿಭಾಗದ ಫಿಜೀಶಿಯನ್ ಗಳು ಅಧ್ಯಯನ ನಡೆಸಿದ್ದು, ಸಾಮಾನ್ಯ ಥಂಡಿ, ಕಫ ಮತ್ತು ಫ್ಲ್ಯೂಗೆ ರಾಸಾಯನಿಕ ಬೆರೆಸಿ ತಯಾರಿಸಿದ ಔಷಧಿಗಿಂತ ಜೇನುತುಪ್ಪ ಕಡಿಮೆ ಬೆಲೆಯ ಹಾಗೂ ಹೆಚ್ಚು ಪರಿಣಾಮಕಾರಿ ಔಷಧಿ ಎಂಬುದನ್ನು ಅಧ್ಯಯನ ನಡೆಸಿ ಕಂಡು ಹಿಡಿದಿದ್ದಾರೆ.
ಜೇನು ತುಪ್ಪ ಹೆಚ್ಚು ಸುರಕ್ಷಿತವಾದ ಪರ್ಯಾಯ ರೋಗ ನಿರೋಧಕವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಮೇಲಿನ ಶ್ವಾಸಕೋಶದ ನಾಳಕ್ಕೆ(ಯುಆರ್ ಟಿಐ) ಆದ ಸೋಂಕನ್ನು ಅದು ಹೇಗೆ ಕಡಿಮೆ ಮಾಡುತ್ತದೆ ಎಂಬುದನ್ನು ವಿಜ್ಞಾನಿಗಳು ಸಾಕ್ಷ್ಯದ ಮೂಲಕ ಬಿಎಂಜೆ ಎವಿಡೆನ್ಸ್ ಬೇಸ್ಡ್ ಮೆಡಿಸಿನ್ ಎಂಬ ಜರ್ನಲ್ ನಲ್ಲಿ ತಜ್ಞರು ಬರೆದಿದ್ದಾರೆ. ಈ ಸಂಬಂಧ ಇನ್ನಷ್ಟು ಅಧ್ಯಯನಗಳು ನಡೆಯಬೇಕಿದೆ ಎಂದಿದ್ದಾರೆ.