ಸೌದಿ ಅರೇಬಿಯಾದ ಶಿಕ್ಷಣ ಕ್ಷೇತ್ರದಲ್ಲಿ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಹತ್ವದ ಬದಲಾವಣೆಯನ್ನ ತಂದಿದ್ದಾರೆ. ವಿಷನ್ 2030 ಅಡಿಯಲ್ಲಿ ಪ್ರಿನ್ಸ್ ಮೊಹಮ್ಮದ್ ಸೌದಿ ರಾಷ್ಟ್ರದ ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಜ್ಞಾನ ತುಂಬಲು ಮುಂದಾಗಿದ್ದಾರೆ.
ಈ ಪ್ರಯೋಗದ ಭಾಗವಾಗಿ ಸೌದಿ ಅರೇಬಿಯಾದ ವಿದ್ಯಾರ್ಥಿಗಳು ಇನ್ಮೇಲೆ ತಮ್ಮ ಪಠ್ಯಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನೂ ಅಭ್ಯಸಿಸುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ವಿವಿಧ ದೇಶದ ಸಂಸ್ಕೃತಿಯ ಬಗ್ಗೆ ಇರುವ ಜ್ಞಾನವನ್ನ ಹೆಚ್ಚಿಸಲು ಹಾಗೂ ಭಾರತೀಯ ಸಂಸ್ಕೃತಿಗಳಾದ ಯೋಗ ಹಾಗೂ ಆಯುರ್ವೇದದ ಮೇಲೂ ಗಮನ ನೀಡಲಾಗಿದೆ.
ಸೌದಿ ಅರೇಬಿಯಾ ಪಠ್ಯ ಕ್ರಮದಲ್ಲಿ ರಾಮಾಯಣ ಹಾಗೂ ಮಹಾಭಾರತವನ್ನ ಸೇರಿಸೋದ್ರ ಜೊತೆಗೆ ವಿಷನ್ 2030 ಭಾಗವಾಗಿ ಇಂಗ್ಲೀಷ್ ಭಾಷೆ ಕಡ್ಡಾಯವಾಗಿ ಇದೆ. ಪಠ್ಯಕ್ರಮದ ವಿಚಾರದ ಕುರಿತಾಗಿ ಟ್ವಿಟರ್ನಲ್ಲಿ ನೌಫ್ ಅಲ್ ಮರ್ವಾಲ್ ಎಂಬವರು ಹೊಸ ಪಠ್ಯಕ್ರಮದ ಮಾಹಿತಿಯನ್ನ ಶೇರ್ ಮಾಡಿದ್ದಾರೆ.
ಸೌದಿ ಅರೇಬಿಯಾ ನ್ಯೂ ವಿಷನ್ 2030 ಅಡಿಯಲ್ಲಿ ಹೊಸ ಪಠ್ಯಕ್ರಮಗಳು ಅಂತರ್ಗತ, ಉದಾರ ಹಾಗೂ ಸಂಸ್ಕೃತಿ ಬಗ್ಗೆ ಜ್ಞಾನವುಳ್ಳ ವಿದ್ಯಾರ್ಥಿಗಳನ್ನ ನಿರ್ಮಿಸುತ್ತದೆ. ಈ ಟ್ವಿಟರ್ ಬಳಕೆದಾರ ತಮ್ಮ ಪುತ್ರನ ಹೊಸ ಪಠ್ಯ ಕ್ರಮದ ಫೋಟೋಗಳನ್ನ ಶೇರ್ ಮಾಡಿದ್ದಾರೆ.
ಇದು ನನ್ನ ಪುತ್ರನ ಇಂದಿನ ಪರೀಕ್ಷಾ ವಿಷಯದ ಸ್ಕ್ರೀನ್ ಶಾಟ್ ಆಗಿದೆ, ಸಮಾಜ ಅಧ್ಯಯನದ ಈ ಪುಸ್ತಕದಲ್ಲಿ ಹಿಂದೂ, ಬೌದ್ಧ, ರಾಮಾಯಣ, ಕರ್ಮ, ಮಹಾಭಾರತ ಹಾಗೂ ಧರ್ಮಕ್ಕೆ ಸಂಬಂಧಿಸಿದ ಪಠ್ಯ ಕ್ರಮವಿದೆ. ಆತನ ಓದಿಗೆ ಸಹಾಯ ಮಾಡಲು ಖುಷಿಯಾಗ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.