ಮಾಲಿನ್ಯ ಮುಕ್ತ ನಾಡನ್ನ ನಿರ್ಮಿಸೋಕೆ ಮುಂದಾಗಿರುವ ಸೌದಿ ಅರೇಬಿಯಾ ರಸ್ತೆಗಳೇ ಇಲ್ಲದ ವಿಶೇಷವಾದ ನಗರವನ್ನ ನಿರ್ಮಿಸೋಕೆ ಪ್ಲಾನ್ ಮಾಡಿದೆ.
ದಿ ಲೈನ್ ಅನ್ನೋದು ವಿವಿಧ ಸಮುದಾಯಗಳನ್ನ ಸೇರಿಸುವ 170 ಕಿಲೋಮೀಟರ್ ಮೂಲಸೌಕರ್ಯ ಯೋಜನೆಯಾಗಿದೆ. ಈ ಯೋಜನೆಯ ಬಹುದೊಡ್ಡ ವಿಶೇಷತೆಯೆಂದರೇ ಈ ಯೋಜನೆಯಲ್ಲಿ ಕಾರುಗಳು ಹಾಗೂ ರಸ್ತೆಗಳನ್ನ ನಗರದಿಂದ ದೂರವಿಡೋಕೆ ನಿರ್ಧರಿಸಲಾಗಿದೆ. ಈ ಮೂಲಕ ಕಾರ್ಬನ್ ಡೈ ಆಕ್ಸೈಡ್ ಇಲ್ಲದ ನಗರ ನಿರ್ಮಾಣಕ್ಕೆ ತೈಲ ರಾಷ್ಟ್ರ ಮುಂದಾಗಿದೆ.
ಯೋಜನೆಯ ಘೋಷಣೆ ಮಾಡಿ ಮಾತನಾಡಿದ ಸೌದಿ ಅರೇಬಿಯಾ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್, ಭವಿಷ್ಯಕ್ಕೆ ಬೇಕಾದ ಹೊಸ ಮಾದರಿಯ ನಗರವನ್ನ ನಿರ್ಮಿಸಬೇಕಾದ ಅವಶ್ಯಕತೆ ನಮ್ಮೆದುರಿದೆ.
170 ಕಿಲೋಮೀಟರ್ ಉದ್ದದ ಈ ನಗರದಲ್ಲಿ 10 ಲಕ್ಷ ಜನರು ವಾಸ ಮಾಡಬಹುದಾಗಿದೆ. ಈ ಹೊಸ ನಗರದಲ್ಲಿ ಶೂನ್ಯ ಕಾರು, ಶೂನ್ಯ ರಸ್ತೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಶೂನ್ಯ ಕಾರ್ಬನ್ ಡೈ ಆಕ್ಸೈಡ್ನ ಜೊತೆಗೆ 95 ಪ್ರತಿಶತ ಪ್ರಕೃತಿಯ ರಕ್ಷಣೆ ಮಾಡಲಾಗುತ್ತೆ ಎಂದು ಹೇಳಿದ್ರು.
ಕಾರ್ಬನ್ ಡೈ ಆಕ್ಸೈಡ್ ಹಾಗೂ ಸಮುದ್ರದ ಸ್ತರಗಳು ಹೆಚ್ಚುತ್ತಿರುವ ಕಾರಣ 2050ರ ವೇಳೆಗೆ ಅರಬ್ ಜನರನ್ನ ಬೇರೆ ನಗರಕ್ಕೆ ಶಿಫ್ಟ್ ಮಾಡಬೇಕಾದ ಅನಿವಾರ್ಯತೆ ಎದುರಾಗಲಿದೆ. 90 ಪ್ರತಿಶತ ಜನರು ಮಾಲಿನ್ಯಯುಕ್ತ ಗಾಳಿಯನ್ನೇ ಸೇವಿಸುತ್ತಿದ್ದಾರೆ. ನಾವು ಅಭಿವೃದ್ಧಿ ಹೊಂದಬೇಕು ಅಂತಾ ಪರಿಸರ ನಾಶ ಮಾಡೋದು ಎಷ್ಟು ಸರಿ..? ಮಾಲಿನ್ಯದ ಕಾರಣದಿಂದ 70 ಲಕ್ಷ ಜನರು ಪ್ರತಿ ವರ್ಷ ಸಾಯಬೇಕಾ..? ಟ್ರಾಫಿಕ್ ದುರ್ಘಟನೆಯಿಂದಾಗಿ ಪ್ರತಿ ವರ್ಷ 10 ಲಕ್ಷ ಜನರನ್ನ ನಾವೇಕೆ ಕಳೆದುಕೊಳ್ಳಬೇಕು? ಹೀಗಾಗಿ ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಸಲುವಾಗಿ ಹೊಸ ನಗರವನ್ನೇ ನಿರ್ಮಾಣ ಮಾಡಲಿದ್ದೇವೆ ಎಂದು ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹೇಳಿದರು.