ಸ್ಯಾನ್ಫ್ರಾನ್ಸಿಸ್ಕೋ ಮೃಗಾಲಯದಿಂದ ಲೆಮೂರ್ ಜಾತಿಯ ಪ್ರಾಣಿಯನ್ನ ಅಪಹರಿಸಿದ ಆರೋಪಿಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅಲ್ಲದೇ ಆರೋಪಿಯನ್ನ ಪತ್ತೆ ಹಚ್ಚಲು ನೆರವಾದ 5 ವರ್ಷದ ಬಾಲಕನಿಗೆ ಮೃಗಾಲಯ ಜೀವಮಾನದ ಸದಸ್ಯತ್ವ ನೀಡಿದೆ.
21 ವರ್ಷದ ಲೆಮೂರ್ ಸ್ಯಾನ್ ಫ್ರಾನ್ಸಿಸ್ಕೋ ಮೃಗಾಲಯದಿಂದ ಬುಧವಾರ ಕಳುವಾಗಿತ್ತು. ಇದ್ಯಾವುದರ ಬಗ್ಗೆ ಮಾಹಿತಿಯೇ ಇಲ್ಲದ 5 ವರ್ಷದ ಬಾಲಕ ಜೇಮ್ಸ್ ಟ್ರಿನ್ ಶಾಲೆ ಮುಗಿಸಿ ಬರ್ತಿದ್ದ ವೇಳೆ ಝೂನಿಂದ 5 ಮೈಲಿ ದೂರವಿರೋ ಸ್ಥಳದಲ್ಲಿ ಲೇಮೂರ್ ಇದೆ. ಲೇಮೂರ್ ಇದೆ ಅಂತಾ ಕೂಗಿದ್ದಾನೆ.
ಇದಾದ ಬಳಿಕ ಕೂಡಲೇ ಸ್ಥಳಕ್ಕಾಗಮಿಸಿದ ಮೃಗಾಲಯ ಸಿಬ್ಬಂದಿ ಹಾಗೂ ಪೊಲೀಸರು ಲೇಮೂರ್ನನ್ನ ಪಂಜರಕ್ಕೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 30 ವರ್ಷದ ಕೋರಿ ಮೆಕ್ಗಿಲ್ಲೋವೇ ಎಂಬವರನ್ನ ವಶಕ್ಕೆ ಪಡೆದಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಸ್ಯಾನ್ ಫ್ರಾನ್ಸಿಸ್ಕೋ ಮೃಗಾಲಯದ ನಿರ್ದೇಶಕಿ ತಾನ್ಯಾ ಪೀಟರ್ಸನ್, ಲೇಮೂರ್ಗೆ ವಯಸ್ಸಾಗಿರೋದ್ರಿಂದ ಕಾಳಜಿಯ ಅವಶ್ಯಕತೆ ಇದೆ. ನಿರ್ಜಲೀಕರಣ ಹಾಗೂ ಹಸಿವಿನಿಂದ ಲೇಮೂರ್ ಬಳಲುತ್ತಿದ್ದಾನೆ. ಸೂಕ್ತ ಚಿಕಿತ್ಸೆಯ ಬಳಿಕ ಲೇಮೂರ್ ತನ್ನ ಕುಟುಂಬವನ್ನ ಸೇರಲಿದ್ದಾನೆ ಅಂತಾ ಮಾಹಿತಿ ನೀಡಿದ್ರು. ಅಲ್ಲದೇ ಬಾಲಕ ಸಹಾಯವನ್ನ ಕೊಂಡಾಡಿದ ನಿರ್ದೇಶಕಿ ಆ ಬಾಲಕ ಒಂದು ಮುಗ್ಧ ಜೀವವನ್ನ ಉಳಿಸಿದ್ದಾನೆ. ಹೀಗಾಗಿ ಆತನಿಗೆ ಮೃಗಾಲಯದ ಜೀವಮಾನದ ಸದಸ್ಯತ್ವ ನೀಡಿ ಗೌರವಿಸಿದ್ದೇವೆ ಅಂತಾ ಹೇಳಿದ್ರು.