ಸರಕು ಸಾಗಾಟದ ಹಡಗಿನಿಂದ ಪೆಸಿಫಿಕ್ ಸಾಗರಕ್ಕ ಬಿದ್ದ 52 ವರ್ಷದ ನಾವಿಕರೊಬ್ಬರು 14 ಗಂಟೆಗಳ ಕಾಲ ಜೀವ ಹಿಡಿದುಕೊಂಡು ಬದುಕಿ ಬಂದಿದ್ದಾರೆ.
ವಿದಾಮ್ ಪೆರೆವರ್ಟಿಲೋವ್ ಹೆಸರಿನ ಈ ನಾವಿಕ ಸಾಗರಕ್ಕೆ ಬಿದ್ದ ಸಂದರ್ಭದಲ್ಲಿ ಜೀವ ರಕ್ಷಕ ಜಾಕೆಟ್ ಧರಿಸಿರಲಿಲ್ಲ. ನೀರಿನಲ್ಲಿ ತೇಲುತ್ತಿದ್ದ ತ್ಯಾಜ್ಯದ ತುಂಡೊಂದನ್ನು ಆಸರೆಗೆ ಬಳಸಿಕೊಂಡ ವಿದಮ್ ಪುನರ್ಜನ್ಮ ಪಡೆದು ಬದುಕಿ ಬಂದಿದ್ದಾರೆ.
ಲಿಥುಯೇನಿಯಾದ ’ಸಿಲ್ವರ್ ಸಪೋರ್ಟರ್’ ಹೆಸರಿನ ಈ ನೌಕೆಯು ನ್ಯೂಜಿಲೆಂಡ್‌ನಿಂದ ಬ್ರಿಟನ್‌ನತ್ತ ಸರಕು ಸಾಗಾಟದಲ್ಲಿ ನಿರತವಾಗಿತ್ತು. ಈ ವೇಳೆ ಇಂಜಿನ್ ರೂಂನಲ್ಲಿ ಇಂಧನ ಪೂರೈಸುವ ಕೆಲಸದ ಪಾಳಿಯಲ್ಲಿದ್ದ ವಿದಮ್, ಸೆಖೆ ತಾಳಲಾರದೇ ಕೋಣೆಯಿಂದ ಹೊರಬಂದಿದ್ದಾರೆ. ಫೆಬ್ರವರಿ 16ರ ಬೆಳಗ್ಗಿನ ಜಾವ 4 ಗಂಟೆಗೆ ಆಯತಪ್ಪಿ ಸಾಗರಕ್ಕೆ ಬಿದ್ದಿದ್ದಾರೆ ವಿದಮ್.
ಸವೆಸಿದ ಹಾದಿಯನ್ನು ಬಿಚ್ಚಿಟ್ಟ ಸಂಗೀತ ಮಾಂತ್ರಿಕ
ಇದಾದ ಆರು ಗಂಟೆಗಳ ಬಳಿಕ ವಿದಮ್ ಮಿಸ್ಸಿಂಗ್ ಆಗಿದ್ದಾರೆ ಎಂದು ನೌಕೆಯಲ್ಲಿದ್ದ ಇತರ ಸಿಬ್ಬಂದಿಗೆ ತಿಳಿದು ಬಂದಿದೆ. ಕೂಡಲೇ ನೌಕೆಯನ್ನು ಹಿಂದಕ್ಕೆ ತಿರುಗಿಸಿ ತುರ್ತು ಸಂದೇಶ ರವಾನೆ ಮಾಡಲಾಯಿತು. ಅಲ್ಲಿಯೇ ಇದ್ದ ಫ್ರೆಂಚ್ ನೌಕಾಪಡೆಯ ಹಡಗೊಂದು ವಿದಮ್ ಪತ್ತೆಗೆ ಮುಂದಾಯಿತು.
ವಿದಮ್ ಕೂಗುತ್ತಿದ್ದದ್ದು ಹಡಗಿನಲ್ಲಿದ್ದ ಸಿಬ್ಬಂದಿಯೊಬ್ಬರಿಗೆ ಕೇಳಿಸಿದೆ. ಕೂಡಲೇ ಆತನನ್ನು ರಕ್ಷಿಸಲಾಯಿತು. “ತಮ್ಮ ನಿಜ ವಯಸ್ಸಿಗಿಂತ 20 ವರ್ಷ ಹೆಚ್ಚಿನವರಂತೆ ಕಂಡ ಅವರು ಬಹಳ ದಣಿದಿದ್ದರೂ ಸಹ ಜೀವಂತ ಬದುಕಿದ್ದರು,” ಎಂದು ನೌಕೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.