ಲಂಡನ್: ವಿಶ್ವದೆಲ್ಲೆಡೆ ತಲ್ಲಣ ತಂದಿರುವ ಕೊರೊನಾ ಸೋಂಕು ತಡೆಗೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ನಿರತರಾಗಿದ್ದಾರೆ. ಹೀಗಿರುವಾಗಲೇ ಕೊರೊನಾ ತಡೆ ಪ್ರಯೋಗಗಳನ್ನು ಗುರಿಯಾಗಿಸಿಕೊಂಡು ರಷ್ಯಾದ ಹ್ಯಾಕರ್ಸ್ ಗಳು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ.
ಅಮೆರಿಕ, ಇಂಗ್ಲೆಂಡ್, ಕೆನಡಾ ದೇಶಗಳು ಈ ರೀತಿ ಗಂಭೀರ ಆರೋಪ ಮಾಡಿವೆ. ರಷ್ಯಾ ಮೂಲದ ಹ್ಯಾಕರ್ಸ್ ಗಳು ಕೊರೊನಾ ವೈರಸ್ ತಡೆ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ತೊಡಗಿರುವ ಸಂಶೋಧನ ತಂಡಗಳು ಮತ್ತು ಸಂಸ್ಥೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಇಂಗ್ಲೆಂಡ್ ನ ರಾಷ್ಟ್ರೀಯ ಸೈಬರ್ ಕೇಂದ್ರವು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾದ ಸಹವರ್ತಿಗಳೊಂದಿಗೆ ಆರೋಪ ಮಾಡಿದೆ.
ಮೂರು ದೇಶಗಳು ಗುರುತಿಸಿರುವಂತೆ ಹ್ಯಾಕರ್ಸ್ ಗುಂಪು ರಚನೆಯಾಗಿದ್ದು ಇದು ಬಹುತೇಕ ರಷ್ಯಾದ ಗುಪ್ತಚರ ಸಂಸ್ಥೆಗಳ ಭಾಗವಾಗಿದೆ ಎನ್ನಲಾಗಿದೆ.
ಕೆನಡಾದ ಸಂವಹನ ಭದ್ರತೆ ಸ್ಥಾಪನೆ(ಸಿಎಸ್ಇ) ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ ಕೂಡ ಇಂತಹ ಅನುಮಾನ ವ್ಯಕ್ತಪಡಿಸಿವೆ. ಇಂಗ್ಲೆಂಡ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಮತ್ತು ಲಂಡನ್ ನ ಇಂಪೀರಿಯಲ್ ಕಾಲೇಜಿನಲ್ಲಿ ಎರಡು ಪ್ರಮುಖ ಲಸಿಕೆ ಪ್ರಯೋಗಗಳು ನಡೆಯುತ್ತಿದ್ದು, ಅಂತಿಮ ಹಂತದಲ್ಲಿವೆ.
ಲಸಿಕೆ ಅಭಿವೃದ್ಧಿ ಮತ್ತು ಸಂಶೋಧನೆಯ ಮಾಹಿತಿಯನ್ನು ಸಂಗ್ರಹಿಸುತ್ತಿರುವ ರಷ್ಯಾದ ಗುಪ್ತಚರ ವಿಭಾಗ ಸೈಬರ್ ದಾಳಿ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.