ಮಾಸ್ಕೋ: ವಿಶ್ವದೆಲ್ಲೆಡೆ ಕೊರೊನಾ ಸೋಂಕು ತೀವ್ರ ಆತಂಕ ಮೂಡಿಸಿದ್ದು ಲಸಿಕೆ ಕಂಡು ಹಿಡಿಯುವ ಪ್ರಯತ್ನಗಳು ಮುಂದುವರೆದಿವೆ.
ಹೀಗಿರುವಾಗಲೇ ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯದ ಮುಖ್ಯ ಸಂಶೋಧಕರು ಆಗಸ್ಟ್ ಮಧ್ಯಭಾಗದಲ್ಲಿ ವಿಶ್ವದ ಮೊದಲ ಕೋವಿಡ್-19 ಲಸಿಕೆ ಬಿಡುಗಡೆ ಮಾಡಲು ಯೋಜಿಸಿದ್ದಾರೆ.
ಪ್ರಯೋಗಗಳ ಫಲಿತಾಂಶಗಳಲ್ಲಿ ಲಸಿಕೆ ಸುರಕ್ಷಿತವೆಂದು ಕಂಡುಬಂದಿದ್ದು ಮೂರನೇ ಹಂತದ ಪ್ರಯೋಗಗಳಿಲ್ಲದೆ ದೊಡ್ಡ ಪ್ರಮಾಣದ ಬಳಕೆಗಾಗಿ ಯಾವುದೇ ಲಸಿಕೆಗಳನ್ನು ಇನ್ನು ಅನುಮೋದಿಸಲಾಗಿಲ್ಲ. ಸ್ವಯಂಸೇವಕರ ಮೇಲಿನ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳು ಪೂರ್ಣಗೊಂಡಿದ್ದು ಅಧ್ಯಯನದ ಮಾಹಿತಿಯ ಪ್ರಕಾರ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಕಂಡುಬಂದಿದೆ.
ರಷ್ಯಾದ ಸೆಚೆನೋವ್ ವಿಶ್ವವಿದ್ಯಾಲಯವು ಸರ್ಕಾರಿ ಗಮಾಲೆ ಇನ್ಸ್ ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿ ಮತ್ತು ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ COVID-19 ಲಸಿಕೆಯ ಕ್ಲಿನಿಕಲ್ ಪ್ರಯೋಗಗಳನ್ನು ಯಶಸ್ವಿಯಾಗಿ ಪೂರೈಸಿದೆ ಎಂದು ಹೇಳಿದೆ.
ಸಂಶೋಧನೆ ಪೂರ್ಣಗೊಂಡಿದ್ದು ಲಸಿಕೆ ಸುರಕ್ಷಿತವಾಗಿದೆ ಎಂಬುದು ಸಾಬೀತಾಗಿರುವುದಾಗಿ ಸೆಚೆನೋವ್ ಯೂನಿವರ್ಸಿಟಿ ಸೆಂಟರ್ ಫಾರ್ ಕ್ಲಿನಿಕಲ್ ರಿಸರ್ಚ್ ಆನ್ ಮೆಡಿಸನ್ಸ್‌ನ ಮುಖ್ಯಸ್ಥರು ಮತ್ತು ಮುಖ್ಯ ಸಂಶೋಧಕಿ ಎಲೆನಾ ಸ್ಮೋಲ್ಯಾರ್ಚುಕ್ ತಿಳಿಸಿದ್ದಾರೆ.
ಸಂಶೋಧನಾ ಕೇಂದ್ರದ ನಿರ್ದೇಶಕ ಅಲೆಕ್ಸಾಂಡರ್ ಗಿಂಟ್ಸ್ ಬರ್ಗ್ ನೀಡಿರುವ ಮಾಹಿತಿ ಪ್ರಕಾರ, ಆಗಸ್ಟ್ 12 ರಿಂದ 14 ರೊಳಗೆ ನಾಗರೀಕರ ಬಳಕೆಗೆ ಔಷಧ ಬಿಡುಗಡೆಯಾಗುವ ಸಾಧ್ಯತೆಯಿದೆ. ಸೆಪ್ಟೆಂಬರ್ ವೇಳೆಗೆ ಖಾಸಗಿ ಕಂಪನಿಗಳು ಬೃಹತ್ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಯನ್ನು ಆರಂಭಿಸಬಹುದಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾಸ್ಕೋ ಟೈಮ್ಸ್ ವರದಿ ಪ್ರಕಾರ, ದೊಡ್ಡ ಪ್ರಮಾಣದಲ್ಲಿ ಲಸಿಕೆ ಉತ್ಪಾದನೆಗೆ ಅನುಮೋದನೆ ಪಡೆಯುವ ಮೊದಲು ಲಸಿಕೆ ಮೂರು ಹಂತದ ಅಧ್ಯಯನಗಳ ಮೂಲಕ ಸುರಕ್ಷಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಒಪ್ಪಿಗೆ ನೀಡಬೇಕಿದೆ ಎನ್ನಲಾಗಿದೆ.