ಮಾಸ್ಕೋ: ವಿಶ್ವದಲ್ಲಿ ತಲ್ಲಣ ಮೂಡಿಸಿರುವ ಕೊರೋನಾ ಸೋಂಕು ತಡೆಗೆ ಅನೇಕ ದೇಶಗಳ ವಿಜ್ಞಾನಿಗಳು, ತಜ್ಞರು ಲಸಿಕೆ ಅಭಿವೃದ್ಧಿಪಡಿಸುವಲ್ಲಿ ನಿರತರಾಗಿದ್ದಾರೆ. ಈಗಾಗಲೇ ಅನೇಕ ಲಸಿಕೆ ಪ್ರಯೋಗಗಳು ಯಶಸ್ಸಿನ ಹಾದಿಯಲ್ಲಿದ್ದು ಅಂತಿಮಹಂತದ ಪ್ರಯೋಗ ಬಾಕಿ ಉಳಿದಿದೆ.
ಹೀಗಿರುವಾಗಲೇ ವಿಶ್ವದ ಮೊತ್ತ ಮೊದಲ ಲಸಿಕೆಯನ್ನು ಸಿದ್ಧಗೊಳಿಸಿರುವುದಾಗಿ ರಷ್ಯಾ ತಿಳಿಸಿದೆ. ಮಾಸ್ಕೋದಲ್ಲಿರುವ ಸರ್ಕಾರಿ ಸ್ವಾಮ್ಯದ ಗಮಾಲೆಯಾ ಇನ್ ಸ್ಟಿಟ್ಯೂಟ್ ಸಂಸ್ಥೆ ಕೊರೊನಾ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ.
ಮಾನವ ಕ್ಲಿನಿಕಲ್ ಪ್ರಯೋಗ ಯಶಸ್ವಿಯಾಗಿದೆ. ಲಸಿಕೆ ನೋಂದಣಿಗಾಗಿ ಸಂಶೋಧನಾ ದಾಖಲೆ ಸಿದ್ದಪಡಿಸಲಾಗುತ್ತಿದ್ದು ನೊಂದಣಿ ಕಾರ್ಯ ಆರಂಭವಾದ ಬಳಿಕ ಅಕ್ಟೋಬರ್ ನಲ್ಲಿ ಸಾರ್ವತ್ರಿಕವಾಗಿ ಲಸಿಕೆ ನೀಡುವ ಅಭಿಯಾನ ಆಯೋಜಿಸಲು ಸಿದ್ಧತೆ ಕೈಗೊಳ್ಳಲಾಗಿದೆ. ರಷ್ಯಾ ಆರೋಗ್ಯ ಸಚಿವ ಮಿಖಾಯಿಲ್ ಮೊರಾಷ್ಕೋ ಈ ಕುರಿತಾಗಿ ಮಾಹಿತಿ ನೀಡಿದ್ದಾರೆ.