ಮಹತ್ವದ ಬೆಳವಣಿಗೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕೊರೊನಾ ವಿರುದ್ದದ ವಿಶ್ವದ ಮೊದಲ ಲಸಿಕೆ ಕುರಿತು ಅಧಿಕೃತವಾಗಿ ಘೋಷಿಸಿದ್ದು, ನೋಂದಣಿ ಪ್ರಕ್ರಿಯೆ ಪೂರ್ಣಗೊಂಡಿದೆ. ಇದು ಇನ್ನು ಕೆಲ ತಿಂಗಳಲ್ಲೇ ವಿಶ್ವದಾದ್ಯಂತ ಮಾರುಕಟ್ಟೆಗೆ ಬರಲಿದೆ.
ಸಾರ್ವಜನಿಕರ ಬಳಕೆಗೆ ಬಂದಿರುವ ಲಸಿಕೆಯನ್ನು ಮೊದಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಪುತ್ರಿ ಮೇಲೆ ಪ್ರಯೋಗಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇಂದು ಅಧಿಕೃತ ನೋಂದಣಿ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಈ ಹಂತ ಮುಗಿದ ಕೂಡಲೇ ಮಾರುಕಟ್ಟೆಗೆ ಲಸಿಕೆ ಬಿಡುಗಡೆಯಾಗಿದೆ. ಜನ ಬಳಕೆಗೆ ಕೊರೊನಾ ಲಸಿಕೆ ಬಿಡುಗಡೆ ಮಾಡಿದ ವಿಶ್ವದ ಮೊದಲ ದೇಶ ಎನ್ನುವ ಹಿರಿಮೆಗೆ ರಷ್ಯಾ ಈಗ ಪಾತ್ರವಾಗಿದೆ.
ರಷ್ಯಾ ರಕ್ಷಣಾ ಸಚಿವಾಲಯ ಗಮಾಲೆಯ ರಿಸರ್ಚ್ ಇನ್ ಸ್ಟಿಟ್ಯೂಟ್ ಸಹಭಾಗಿತ್ವದಲ್ಲಿ ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಜೂನ್ 18ರಂದು ಮೊದಲ ಹಂತ, ಜುಲೈ 20 ರಂದು ಎರಡನೇ ಹಂತದ ಪ್ರಯೋಗ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಲಸಿಕೆ ಪರಿಣಾಮಕಾರಿಯಾಗಿದೆ ಎಂದು ಹೇಳಲಾಗಿದೆ.
ರಷ್ಯಾದ ಕೊರೊನಾ ಲಸಿಕೆ ಪರೀಕ್ಷೆಯ ವಿವಿಧ ಹಂತಗಳನ್ನು ಸಮರ್ಪಕವಾಗಿ ಪೂರೈಸಿಲ್ಲವೆಂಬ ಕಾರಣಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಈ ಲಸಿಕೆಯ ವಿಶ್ವಾಸಾರ್ಹತೆಗೆ ಅನುಮಾನ ವ್ಯಕ್ತಪಡಿಸಿದ್ದು, ಹೀಗಾಗಿಯೆ ರಷ್ಯಾ ಅಧ್ಯಕ್ಷರ ಪುತ್ರಿ ಮರಿಯಾ ಪುಟಿನ್ ಮೇಲೆಯೇ ಪ್ರಯೋಗ ಮಾಡಿ ಸಾಬೀತುಪಡಿಸಲು ಈಗ ತಜ್ಞರು ಮುಂದಾಗಿದ್ದಾರೆ.