ಬೀಜಿಂಗ್: ಕೊರೋನಾ ಉಗಮಸ್ಥಾನ ಚೀನಾದಲ್ಲಿ ಹ್ಯಾಂಟಾ ವೈರಸ್ ನಂತರ ಬುಬೊನಿಕ್ ವೈರಸ್ ಕೂಡ ತಲ್ಲಣ ತಂದಿದೆ.
ಮಹಾಮಾರಿ ಬುಬೋನಿಕ್ ಪ್ಲೇಗ್ ಕಾಣಿಸಿಕೊಂಡಿದ್ದು, ಇದನ್ನು ನಿಯಂತ್ರಿಸುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಮಂಗೋಲಿಯಾ ಸ್ವಾಯತ್ತ ಪ್ರದೇಶದ ಬಾಯನ್ನೂರ್ ಎಂಬಲ್ಲಿ ಶಂಕಿತ ಬುಬೊನಿಕ್ ಪ್ರಕರಣ ವರದಿಯಾಗಿದ್ದು, ಪ್ಲೇಗ್ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕೆ ಎಚ್ಚರಿಕೆ ಘೋಷಣೆ ಮಾಡಲಾಗಿದೆ. ಈ ವರ್ಷದ ಅಂತ್ಯದವರೆಗೆ ಅಲರ್ಟ್ ಘೋಷಣೆ ಮಾಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಹೇಳಿದ್ದಾರೆ.
ಬಾಯನ್ನೂರ್ ನಗರದಲ್ಲಿ ಬುಬೋನಿಕ್ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದ್ದು, ಜನ ಜಾಗೃತರಾಗಬೇಕು. ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಲಾಗಿದೆ. ಅನಾರೋಗ್ಯ ಲಕ್ಷಣ ಕಂಡುಬಂದರೆ ಕೂಡಲೇ ಆಸ್ಪತ್ರೆಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.
ಜುಲೈ 1 ರಂದು ಪಶ್ಚಿಮ ಮಂಗೋಲಿಯಾದ ಕೋವ್ಡ್ ಪ್ರದೇಶದಲ್ಲಿ 27 ವರ್ಷದ ವ್ಯಕ್ತಿ ಮತ್ತು ಆತನ 17ವರ್ಷದ ಸಹೋದರನಿಗೆ ಸೋಂಕು ತಗುಲಿರುವ ಪ್ರಕರಣ ಪತ್ತೆಯಾಗಿರುವುದು ದೃಢಪಟ್ಟಿದೆ. ಬುಬೋನಿಕ್ ಬ್ಯಾಕ್ಟೀರಿಯಾ ಕಾಯಿಲೆಯಾಗಿದೆ. ಸರಿಯಾದ ಚಿಕಿತ್ಸೆ ಸಿಗದಿದ್ದರೆ 24ಗಂಟೆಯೊಳಗೆ ಸೋಂಕಿತ ವ್ಯಕ್ತಿ ಸಾವನ್ನಪ್ಪುತ್ತಾನೆ. ಬುಬೊನಿಕ್ ಪ್ಲೇಗ್ ಮಾರ್ಮೋಟ್‌ಗಳಂತಹ ಕಾಡು ಅಳಿಲುಗಳ ಮೇಲೆ ಇರುವ ಚಿಗಟಗಳಿಂದ ಹರಡುವ ಬ್ಯಾಕ್ಟೀರಿಯಾದ ಕಾಯಿಲೆಯಾಗಿದೆ ಎಂದು ಹೇಳಲಾಗಿದೆ.