ಲಂಡನ್: ಈ ವರ್ಷ ಜನವರಿ 29 ರಂದು ಅಮೇರಿಕಾ ಸೂರ್ಯನ ಮೇಲ್ಮೈಯ ಹೈ ರೆಸಲ್ಯೂಷನ್ ಫೋಟೋಗಳನ್ನು ಬಿಡುಗಡೆ ಮಾಡಿತ್ತು.
ಅವು ಡೇನಿಯಲ್ ಕೆ. ಇನೊಯಿ ಸೋಲಾರ್ ಟೆಲಿಸ್ಕೋಪ್ (ಡಿಕೆಐಎಸ್ ಟಿ) ನಿಂದ ತೆಗೆದ ಚಿತ್ರಗಳಾಗಿದ್ದವು. ಕೋಶದ ಮಾದರಿಯ ವಸ್ತು ಉರುಳುತ್ತಿರುವಂತೆ ಚಿತ್ರ ಕಾಣುತ್ತಿತ್ತು.
“ಗೆಲಿಲಿಯೋ ಕಾಲದಿಂದಲೂ ನೆಲದಿಂದ ಸೂರ್ಯನನ್ನು ಅಧ್ಯಯನ ಮಾಡುವ ಪ್ರಯತ್ನ ನಡೆದಿದೆ. ಆದರೆ, ಈ ಹಂತದ ಅಧ್ಯಯನ ಮಾನವನ ದೊಡ್ಡ ಸಾಧನೆಯಾಗಿದೆ ಎಂದು ಸಂಶೋಧನಾ ಪ್ರಾಧ್ಯಾಪಕ ಜೆಫ್ ಕುನ್ ಹೇಳಿದ್ದರು.
ಇದಾಗಿ ನಾಲ್ಕೇ ತಿಂಗಳ ಒಳಗೆ ಇಂಗ್ಲೆಂಡ್ ನ 66 ವರ್ಷದ ನಿವೃತ್ತ ಛಾಯಾಚಿತ್ರ ಉಪನ್ಯಾಸಕ ಪೌಲ್ ಅಂಡ್ರೆವ್ ಸೂರ್ಯನ ಮೇಲ್ಮೈ ಅಪರೂಪದ ಹೈ ರೆಸಲ್ಯೂಷನ್ ಫೋಟೋಗಳನ್ನು ತೆಗೆದಿದ್ದಾರೆ.
ಟೆಲಿಸ್ಕೋಪ್ ನಿಂದ ಉದ್ಯಾನ ಒಂದರಲ್ಲಿ ತೆಗೆದಿರುವ ಚಿತ್ರಗಳು ಇವಾಗಿದ್ದು, ಸೂರ್ಯನ ಮೇಲ್ಮೈಯಲ್ಲಿ ಬೆಂಕಿ ಚಿಮ್ಮುತ್ತಿರುವುದು ಕಾಣುತ್ತದೆ.
“ಸೂರ್ಯನ ಚಿತ್ರ ತೆಗೆಯಲು ಬೇಸಿಗೆ ಉತ್ತಮ ಕಾಲ. ಟೆಲಿಸ್ಕೋಪ್ ಪಡೆಯಲು ಸಾಕಷ್ಟು ಹಣ ಹೊಂದಿಸಿದೆ” ಎಂದು ಪೌಲ್ ಹೇಳಿದ್ದಾರೆ. “ಸೂರ್ಯನ ಮೇಲ್ಮೈ ಚಿತ್ರಣ ಬದಲಾಗುತ್ತಿರುತ್ತದೆ. ನಾನು ಅಂಥ ನಂಬಲಾಗದ ದೃಶ್ಯಗಳನ್ನು ನೋಡಿದ್ದೇನೆ. ವರ್ಷಗಳ ಹಿಂದೆ ದುಬಾರಿ ಟೆಲಿಸ್ಕೋಪ್ ಗಳಿಂದ ತೆಗೆದ ಚಿತ್ರಗಳಿಗಿಂತ ಈ ಚಿತ್ರಗಳು ಉತ್ತಮವಾಗಿವೆ” ಎಂದು ಪೌಲ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಪೌಲ್ ಕೆಂಟ್ ವಿಶ್ವವಿದ್ಯಾಲಯದಿಂದ ನಿವೃತ್ತರಾಗಿದ್ದಾರೆ. 50 ವರ್ಷಗಳಿಂದ ವೃತ್ತಿನಿರತ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತಿಯ ನಂತರವೂ ಖಗೋಳ ಶಾಸ್ತ್ರ ಅಧ್ಯಯನ ಮಾಡುತ್ತಿದ್ದಾರೆ.