ಮಿಸೆಸ್ ಶ್ರೀಲಂಕಾ 2021 ಪುಷ್ಪಿಕಾ ಡಿ ಸಿಲ್ವಾ ಅವರ ಕಿರೀಟವನ್ನ ಕಸಿದುಕೊಂಡ ಪ್ರಕರಣ ಹಿನ್ನೆಲೆ ಕೊಲಂಬಿಯಾ ಪೊಲೀಸರು ಮಿಸೆಸ್ ಶ್ರೀಲಂಕಾ ವರ್ಲ್ಡ್ 2019 ಕ್ಯಾರೋಲಿನ್ ಜ್ಯೂರಿ ಅವರನ್ನ ಬಂಧಿಸಿದ್ದಾರೆ.
ನೇರ ಪ್ರಸಾರದ ಕಾರ್ಯಕ್ರಮದಲ್ಲಿ ಕ್ಯಾರೋಲಿನ್ ಪುಷ್ಪಿಕಾ ಅವರ ತಲೆಗೆ ಹಾಕಲಾಗಿದ್ದ ಕಿರೀಟವನ್ನ ಬಲವಂತದಿಂದ ಕಸಿದುಕೊಂಡಿದ್ದರು. ಪುಷ್ಪಿಕಾ ಅಳುತ್ತಲೇ ವೇದಿಕೆಯಿಂದ ನಿರ್ಗಮಿಸಿದ್ದರು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ಕ್ಯಾರೋಲಿನ್ ನಡವಳಿಕೆ ವಿರುದ್ಧ ಸಾಕಷ್ಟು ಟೀಕೆಗಳು ಕೇಳಿ ಬಂದಿದ್ದವು.
ಪುಷ್ಪಿಕಾರನ್ನ ಸ್ಪರ್ಧೆಯ ವಿಜೇತೆ ಎಂದು ಘೋಷಿಸಿದ ಕೆಲವೇ ಕ್ಷಣಗಳಲ್ಲಿ ವೇದಿಕೆಯಲ್ಲಿ ಮಾತನಾಡಿದ ಕ್ಯಾರೋಲಿನ್, ಸ್ಪರ್ಧೆಯ ನಿಯಮಾವಳಿಗಳ ಪ್ರಕಾರ ವಿಚ್ಚೇದನ ಪಡೆದವರು ಸ್ಪರ್ಧೆಯಲ್ಲಿ ಭಾಗವಹಿಸುವಂತಿಲ್ಲ. ಪುಷ್ಪಿಕಾ ವಿಚ್ಚೇದಿತ ಮಹಿಳೆ ಆಗಿರೋದ್ರಿಂದ ಈ ಪಟ್ಟವನ್ನ ಆಕೆಗೆ ನೀಡೋದಿಲ್ಲ ಎಂದು ಹೇಳಿದ್ರು. ಅಲ್ಲದೇ ಬಲವಂತದಿಂದ ಪುಷ್ಪಿಕಾರ ತಲೆಗೆ ತೊಡಿಸಲಾಗಿದ್ದ ಕಿರೀಟವನ್ನ ಕಸಿದು ಎರಡನೇ ಸ್ಥಾನದಲ್ಲಿದ್ದ ಮಹಿಳೆಗೆ ತೊಡಿಸಿದ್ದರು.
ಘಟನೆಯಿಂದ ನೊಂದಿದ್ದ ಪುಷ್ಪಿಕಾ ತಾನು ಪತಿಯಿಂದ ದೂರಾಗಿದ್ದೇನೆ ಅಷ್ಟೇ. ವಿಚ್ಚೇದನ ಪಡೆದಿಲ್ಲ. ಕಿರೀಟವನ್ನ ಕಸಿಯುವ ವೇಳೆ ನನ್ನ ತಲೆಗೆ ಪೆಟ್ಟಾಗಿದೆ. ಹೀಗಾಗಿ ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಎಚ್ಚರಿಕೆಯನ್ನ ನೀಡಿದ್ದರು.
ಈ ಘಟನೆ ಬಳಿಕ ಸೂಕ್ತ ಪರಿಶೀಲನೆ ನಡೆಸಿದ ವೇಳೆ ಸ್ಪರ್ಧೆಯ ಆಯೋಜಕರಿಗೆ ಪುಷ್ಪಿಕಾ ವಿಚ್ಛೇದನ ಪಡೆದಿಲ್ಲ ಎಂಬ ವಿಚಾರ ತಿಳಿದಿದೆ. ಹೀಗಾಗಿ ಪುಷ್ಪಿಕಾರ ಬಳಿ ಕ್ಷಮೆ ಕೇಳಿದ್ದ ಆಯೋಜಕರು ಕಿರೀಟವನ್ನ ಹಿಂದಿರುಗಿಸಿದ್ದರು.