40 ವರ್ಷಗಳ ಹಿಂದೆ ಕ್ರಾಂತಿಕಾರಿ ಯುದ್ಧದಲ್ಲಿ ಭಾಗಿಯಾಗಿದ್ದ ಜನರಲ್ ಪ್ರತಿಮೆಯಿಂದ ತಾನು ಕದ್ದ ಖಡ್ಗವನ್ನ ವ್ಯಕ್ತಿಯೊಬ್ಬರು ಹಿಂದಿರುಗಿಸಿದ್ದಾರೆ. ಅಲ್ಲದೇ ತಮ್ಮ ಕಳ್ಳತನದ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮ್ಯಾಸಚೂಸೆಟ್ಸ್ ಪಟ್ಟಣದ ಐತಿಹಾಸಿಕ ಆಯೋಗದ ಮುಖ್ಯಸ್ಥರಿಗೆ ಹೇಳಿದ್ದಾರೆ.
ವೆಸ್ಟ್ ಫೀಲ್ಡ್ನ ಐತಿಹಾಸಿಕ ಆಯೋಗದ ಅಧ್ಯಕ್ಷರಾದ ಸಿ.ಡಿ ಪಿ. ಗೇರ್ಲಾಡ್ ಈ ಬಗ್ಗೆ ಮಾಹಿತಿ ನೀಡಿದ್ದು 1980ರಲ್ಲಿ ಪಟ್ಟಣದಲ್ಲಿದ್ದ ಜನರಲ್ ವಿಲಿಯಂ ಶೆಪರ್ಡ್ ಪ್ರತಿಮೆಯಿಂದ ಖಡ್ಗವನ್ನ ಕಳವು ಮಾಡಿದ್ದಾರೆ ಎಂದು ಹೇಳಿದ್ದಾರೆ.
40 ವರ್ಷಗಳ ಹಿಂದೆ ಖಡ್ಗವನ್ನ ಕದ್ದಿದ್ದ ವ್ಯಕ್ತಿ ಈ ವಿಚಾರವಾಗಿ ಬಹಳ ಪಶ್ಚಾತಾಪ ಪಟ್ಟಿದ್ದರು ಎನಿಸುತ್ತೆ. ನಮ್ಮ ಯೌವನದಲ್ಲಿ ಮಾಡುವ ತಪ್ಪುಗಳು ನಮ್ಮ ಜೀವನದ ಉದ್ದಕ್ಕೂ ಕಾಡುತ್ತವೆ ಅನ್ನೋದಕ್ಕೆ ಅಪರಿಚಿತ ವ್ಯಕ್ತಿಯ ಈ ಘಟನೆ ಒಂದು ಉತ್ತಮ ಉದಾಹರಣೆ ಎಂದು ಗೆರ್ಲಾಡ್ ಹೇಳಿದ್ದಾರೆ.
ಕಳುವು ಮಾಡಿದ ವ್ಯಕ್ತಿ ವೆಸ್ಟ್ಫೀಲ್ಡ್ ಸ್ಟೇಟ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಾಗಿದ್ದ ವೇಳೆ ಪಟ್ಟಣದ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಒಂದು ರಾತ್ರಿ ಪಾನಮತ್ತರಾಗಿದ್ದಾಗ ಈತ ಹಾಗೂ ಸ್ನೇಹಿತರ ಗುಂಪು ಈ ಖಡ್ಗವನ್ನ ಕಳುವು ಮಾಡಿತ್ತು. ಮಾರನೇ ದಿನವೇ ಮಾಡಿದ ತಪ್ಪಿನ ಅರಿವಾಗಿದ್ದರೂ ಸಹ ಖಡ್ಗವನ್ನ ಹಿಂದಿರುಗಿಸಿದರೆ ಶಿಕ್ಷೆಯಾಗಬಹುದೆಂಬ ಭಯ ಹೊಂದಿದ್ದರು.