60 ದಶಲಕ್ಷ ವರ್ಷಗಳ ಹಿಂದೆ ಕಾಣೆಯಾಗಿದ್ದ ಸಸ್ಯವೊಂದು ಹವಾಮಾನ ಬದಲಾವಣೆಯ ಕಾರಣದಿಂದಾಗಿ ಯುಕೆಯಲ್ಲಿ ಮತ್ತೆ ಬೆಳೆಯಲು ಆರಂಭಿಸಿದೆ ಅಂತಾ ಸಂಶೋಧಕರು ತಿಳಿಸಿದ್ದಾರೆ.
ಡೈನೋಸಾರ್ಗಳು ಭೂಮಿಯ ಮೇಲೆ ವಾಸಿಸುತ್ತಿದ್ದ ಕಾಲದಲ್ಲೇ ಈ ಸೈಕಾಡ್ ಜಾತಿಯ ಸಸ್ಯಗಳೂ ಸಹ ಭೂಮಿಯ ಮೇಲೆ ಇದ್ದವು. 60 ದಶಲಕ್ಷ ವರ್ಷಗಳ ಹಿಂದೆ ಯುಕೆಯಲ್ಲಿ ಈ ಸಸ್ಯಗಳು ದಟ್ಟವಾಗಿ ಬೆಳೆದಿದ್ದವು. ಅದಾದ ಬಳಿಕ ನಶಿಸಿ ಹೋಗಿದ್ದ ಈ ಸಸಿಗಳು ಹವಾಮಾನ ವೈಪರೀತ್ಯದಿಂದಾಗಿ ಮತ್ತೆ ಕಾಣಸಿಕ್ಕಿವೆ ಅಂತಾ ತಜ್ಞರು ಹೇಳಿದ್ದಾರೆ.
ಈ ಸಸ್ಯಗಳನ್ನ ಈ ಹಿಂದೆ ಪಳೆಯುಳಿಕೆ ರೂಪದಲ್ಲಿ ಅಲಾಸ್ಕಾ ಹಾಗೂ ಅಂಟಾರ್ಟಿಕ ಭಾಗದಲ್ಲಿ ಕಂಡುಹಿಡಿಯಲಾಗಿತ್ತು . ಕುತೂಹಲಕಾರಿ ವಿಚಾರ ಏನಂದ್ರೆ ಯುಕೆಯಲ್ಲಿ ಈ ಸಸ್ಯ ಕಾಣಸಿಕ್ಕಿದ್ದು ಮಾತ್ರವಲ್ಲದೇ 25 ವರ್ಷಗಳ ಹಿಂದೆ ಇತ್ತು ಎನ್ನಲಾದ ಜೇಡರಹುಳು ಕೂಡ ಕಣ್ಣಿಗೆ ಬಿದ್ದಿದೆ. ಗ್ರೇಟ್ ಫಾಕ್ಸ್ ಎಂಬ ಹೆಸರಿನ ಈ ಜೇಡ ಯುಕೆಯ ದೈತ್ಯ ಜೇಡಗಳಲ್ಲಿ ಒಂದಾಗಿದೆ. ಈ ಜೇಡ ಅಳಿವಿನಂಚಿನಲ್ಲಿದೆ ಅಂತಾ ತಜ್ಞರು ಅಭಿಪ್ರಾಯಪಟ್ಟಿದ್ದರು. ಆದರೆ ಇದೀಗ ಮತ್ತೊಮ್ಮೆ ಈ ಜೇಡ ಕಣ್ಣಿಗೆ ಬಿದ್ದಿದೆ.