ಸಿಂಗಾಪುರದ ಮೃಗಾಲಯದಲ್ಲಿ ಅಪರೂಪದ ಮಡಗಾಸ್ಕರ್ ರೆಡ್ ರಫ್ಡ್ ಲೆಮೂರ್ಸ್ ಅವಳಿ ಮರಿ ಹಾಕಿದೆ. ಆಫ್ರಿಕಾ ಖಂಡದ ಮಡಗಾಸ್ಕರ್ ಪ್ರದೇಶದಲ್ಲಿ ಹೆಚ್ಚಾಗಿ ಕಂಡು ಬರುವ ಈ ರೆಡ್ ರಫ್ಡ್ ಲೆಮೂರ್ಸ್ ಕಾಡುಪಾಪನಂತೆ ಕಾಣುವ ಕೋತಿಯ ಜಾತಿಯ ಪ್ರಾಣಿ.
ಇತ್ತೀಚೆಗೆ ಅಳಿವಿನಂಚಿನತ್ತ ಸಾಗುತ್ತಿರುವ ಈ ಪ್ರಾಣಿಯನ್ನು ಉಳಿಸುವ ಪ್ರಯತ್ನಗಳು ನಡೆಯುತ್ತಿವೆ. ಪಾಪದ ಪ್ರಾಣಿಯಂತೆ ಕಾಣುವ ಇದನ್ನು ಸಿಂಗಾಪುರ ಮೃಗಾಲಯಕ್ಕೆ ತಂದಾಗಿನಿಂದಲೂ ಪ್ರವಾಸಿಗರು, ಪ್ರಾಣಿಪ್ರಿಯರ ಗಮನ ಸೆಳೆದಿತ್ತು.
ವಿಶೇಷವೆಂದರೆ ಸಿಂಗಾಪುರ ಮೃಗಾಲಯದಲ್ಲಿ ಕಳೆದ 11 ವರ್ಷದಿಂದ ಯಾವುದೇ ಪ್ರಾಣಿಯೂ ಮರಿ ಹಾಕಿರಲಿಲ್ಲ. ಇದೀಗ ಅಪರೂಪದ ರೆಡ್ ರಫ್ಡ್ ಲೆಮೂರ್ಸ್ ಮರಿ ಹಾಕಿರುವುದು ಸಂತಸದ ವಾತಾವರಣ ನಿರ್ಮಿಸಿದೆ. ಅದೂ ಅಲ್ಲದೆ, ಅವಳಿ ಮರಿಗಳಿಗೆ ಜನ್ಮ ನೀಡಿದ್ದು, ಬಟ್ಟಲುಕಣ್ಣ ಇವಕ್ಕಿನ್ನೂ ನಾಮಕರಣ ಮಾಡಬೇಕು, ಹೆಸರಿಡಬೇಕು ಎಂದು ಸಂಭ್ರಮದಿಂದ ನುಡಿಯುತ್ತಾರೆ ಮೃಗಾಲಯದ ಸಿಬ್ಬಂದಿ.