ಇಡೀ ಬ್ರಹ್ಮಾಂಡ ಇರುವುದು ತನಗೆ ಮಾತ್ರ ಎಂಬ ರೀತಿ ಬದುಕುವ ಮನುಷ್ಯನಿಂದಾಗಿ ಮೃದುಕೈ ಮೀನು (ಸ್ಮೂಥ್ ಹ್ಯಾಂಡ್ ಫಿಶ್) ಅಳಿವಿನಂಚು ತಲುಪಿವೆ.
ಒಂದಲ್ಲಾ ಒಂದು ರೀತಿಯಲ್ಲಿ ಪರಿಸರದ ಮೇಲೆ ದೌರ್ಜನ್ಯ ಎಸಗುವ ಮಾನವ, ಅರಣ್ಯನಾಶ, ಗಣಿಗಾರಿಕೆ, ಮೀನುಗಾರಿಕೆ ಸೇರಿದಂತೆ ಹಲವು ರೀತಿಯಿಂದ ಭೂಮಿಯನ್ನು ಭೋಗಿಸಿ ತನ್ನ ನಾಶಕ್ಕೂ ಗುಂಡಿ ತೋಡಿಕೊಳ್ಳುತ್ತಾನೆ. ಇದೀಗ ಮನುಷ್ಯನ ದುರಾಸೆಯ ಫಲವಾಗಿ ಆಸ್ಟ್ರೇಲಿಯಾದಲ್ಲಿ ಅಪರೂಪವೆನಿಸಿದ ಸಮುದ್ರ ಜೀವಿ ಸ್ಮೂಥ್ ಹ್ಯಾಂಡ್ ಫಿಶ್ ಬಲಿಯಾಗುತ್ತಿವೆ. ಅತಿಯಾದ ಮೀನುಗಾರಿಕೆಯಿಂದಾಗಿ ಇವು ಬಲೆಗೆ ಬೀಳುತ್ತಿದ್ದು, ಸಮುದ್ರ ತಳದಲ್ಲಿನ ಇವುಗಳ ಆವಾಸಸ್ಥಾನಕ್ಕೇ ಪೆಟ್ಟು ಬಿದ್ದಿದೆ.
ಸಂಶೋಧಕ ಫ್ರಾಕೋಯಿಸ್ ಪೆರಾನ್ ಪ್ರಕಾರ, ಇವು ಸಮುದ್ರದ ತಳದಲ್ಲಿ ವಾಸಿಸುವ ಜೀವಿಗಳು. ಇವುಗಳಿಗೆ ಉಳಿದ ಮೀನಿನಂತೆ ಈಜುಕೋಶ ಇರುವುದಿಲ್ಲ. ಬದಲಿಗೆ ಮನುಷ್ಯರ ಹಸ್ತದಂತಹ ಅಂಗ ಇದಕ್ಕೆ ಇರಲಿದೆ. ಇದು ಈಜುವುದಕ್ಕಿಂತ ಹೆಚ್ಚು ನಡೆದಾಡುವುದೇ ಜಾಸ್ತಿ. ಇದರಂತೆಯೇ ಸಮುದ್ರತಳದಲ್ಲಿ ವಾಸಿಸುವ ಇಚ್ಚಿಪ್ಪು ಮೀನುಗಳಿಗೆ ಬಲೆ ಬೀಸಿದಾಗ ಅಲ್ಲೇ ಇರುವ ಇವೂ ಬಲೆಗೆ ಬೀಳುತ್ತವೆ. ಇದರಿಂದ ಅವುಗಳ ಸಂತತಿ ನಾಶ ಹೊಂದುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.