ಇದೊಂದು ವಿಚಿತ್ರ ನಾಯಿ. ನಾಯಿ ಬೊಗಳುವುದಕ್ಕೆ ಫೇಮಸ್. ಆದರೆ ಈ ಅಪರೂಪದ ತಳಿಯ ನಾಯಿ ಹಾಡುವುದಕ್ಕೆ ಹೆಸರುವಾಸಿ. ಈ ತಳಿಯ ನಾಯಿ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತಾದರೂ 50 ವರ್ಷಗಳ ನಂತರ ಈಗ ಕಾಡಿನಲ್ಲಿ ಗುರುತಿಸಲಾಗಿದೆ.
ನ್ಯೂ ಗಿನಿಯಾ ಹಾಡುವ ನಾಯಿಗಳು ವಿಚಿತ್ರವಾಗಿ ಕೂಗುವುದರಿಂದಲೇ ಹೆಸರುವಾಸಿಯಾಗಿದೆ. ಇವುಗಳನ್ನು ಹಂಪ್‌ಬ್ಯಾಕ್ ತಿಮಿಂಗಿಲದ ಕೂಗಿಗೆ ಹೋಲಿಸಲಾಗಿದೆ.
1970ರ ದಶಕದಲ್ಲಿ ಸೆರೆಹಿಡಿಯಲಾದ ಸುಮಾರು 200 ಹಾಡುವ ನಾಯಿಗಳು ಸಂರಕ್ಷಣಾ ಕೇಂದ್ರಗಳಲ್ಲಿ ಅಥವಾ ಪ್ರಾಣಿಸಂಗ್ರಹಾಲಯಗಳಲ್ಲಿವೆ. ಆದರೆ, ಈ ತಳಿ 50 ವರ್ಷಗಳಿಂದ ಕಾಡಿನಲ್ಲಿ ಕಾಣಿಸಿರಲಿಲ್ಲ ಎನ್ನಲಾಗಿದೆ.
ಆದರೆ ನ್ಯೂ ಗಿನಿಯಾ ಹೈಲ್ಯಾಂಡ್ ವೈಲ್ಡ್ ಡಾಗ್ ಫೌಂಡೇಶನ್ ನಡೆಸಿದ ಸಂಶೋಧನೆಯ ನಂತರ, ಇದರ ಇರುವಿಕೆ ಖಾತ್ರಿಯಾಯಿತು.
ಇಂಡೋನೇಷ್ಯಾದ ಪಪುವಾದಲ್ಲಿರುವ ಪುನ್‌ಕಾಕ್ ಜಾಯಾಗೆ ಸಂಶೋಧಕರ ಗುಂಪು ಪ್ರಯಾಣಿಸುವಾಗ ಹೈಲ್ಯಾಂಡ್ ವೈಲ್ಡ್ ಡಾಗ್‌ಗಳಿರುವುದನ್ನು ಗಮನಿಸಿದರು.
ಎರಡು ವರ್ಷಗಳ ನಂತರ ಅವರು ನಾಯಿಗಳಿಂದ ರಕ್ತದ ಮಾದರಿ ತೆಗೆದುಕೊಂಡು, ಸೆರೆಯಲ್ಲಿರುವ ನ್ಯೂಗಿನಿಯಾ ಹಾಡುವ ನಾಯಿಗಳ ಪ್ಯಾಕ್‌ಗೆ ಹೋಲಿಸಿದರು.