ಫ್ಲೋರೆನ್ಸಿಯಾ: ಕಡಿದಾದ ಇಳಿಜಾರಿನಲ್ಲಿ ಬಿದ್ದು ಹೋಗುತ್ತಿದ್ದ ಮಗುವನ್ನು ವ್ಯಕ್ತಿಯೊಬ್ಬ ಬೈಕ್ನಿಂದ ಜಿಗಿದು ರಕ್ಷಣೆ ಮಾಡಿದ ಘಟನೆ ಕೊಲಂಬಿಯಾ ದೇಶದ ಫ್ಲೊರೆನ್ಸಿಯಾದ ಪಕ್ಕದ ರಿನ್ಕೋನ್ ಡೆ ಲಾ ಎಸ್ಟ್ರೆಲ್ಲಾ ಎಂಬಲ್ಲಿ ನಡೆದಿದೆ. ಘಟನೆಯ ಸಿಸಿ ಟಿವಿ ಫೂಟೇಜ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು 1.7 ಲಕ್ಷ ಜನ ವೀಕ್ಷಿಸಿದ್ದಾರೆ.
ಅದೊಂದು ಕಡಿದಾದ ರಸ್ತೆ. ಪಕ್ಕದಲ್ಲಿ ಇಳಿಜಾರು ಪ್ರದೇಶವಿದೆ. ಅಕ್ಕಪಕ್ಕದಲ್ಲಿ ಮನೆಗಳಿವೆ. ಮನೆಯೊಂದರ ಎದುರು ವಾಕರ್ನಲ್ಲಿ ಕುಳಿತು ಆಡುತ್ತಿದ್ದ ಸುಮಾರು ಒಂದೂವರೆ ವರ್ಷದ ಮಗು ನಿಯಂತ್ರಣ ತಪ್ಪಿ ಜಾರಿಕೊಂಡು ಹೊರಟಿತ್ತು.
ಮಗು ಹೊತ್ತ ವಾಕರ್ ರಸ್ತೆಯನ್ನೂ ದಾಟಿ ಇಳಿಜಾರಿನತ್ತ ಉರುಳಿಕೊಂಡು ಹೋಗುತ್ತಿತ್ತು. ಈ ಸಂದರ್ಭದಲ್ಲಿ ರಸ್ತೆಯಲ್ಲಿ ಬೈಕ್ ಮೇಲೆ ತೆರಳುತ್ತಿದ್ದ ವ್ಯಕ್ತಿ ತಕ್ಷಣ ಜಾಗೃತನಾಗಿ ಚಾಲನೆಯಲ್ಲಿದ್ದ ಬೈಕ್ನ್ನು ಅಲ್ಲಿಯೇ ಬಿಟ್ಟು, ಜಿಗಿದು ಓಡಿ ಹೋಗಿ ಮಗುವನ್ನು ಹಿಡಿದಿದ್ದಾನೆ.
ವ್ಯಕ್ತಿ ಮಗುವನ್ನು ಹಿಡಿಯುತ್ತಿದ್ದಂತೆ ಮಹಿಳೆಯೊಬ್ಬಳು ಓಡಿ ಬರುತ್ತಾಳೆ. ವ್ಯಕ್ತಿ ಒಂದೇ ಕ್ಷಣ ವಿಳಂಬ ಮಾಡಿದರೂ ಮಗು ಪ್ರಪಾತಕ್ಕೆ ಉರುಳಿ ಪ್ರಾಣ ಕಳೆದುಕೊಳ್ಳುವುದರಲ್ಲಿ ಸಂಶಯವಿರಲಿಲ್ಲ. ಮಗುವನ್ನು ರಕ್ಷಣೆ ಮಾಡಿದ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆದರೆ, ನೆಟ್ಟಿಗರು ಆತನ ಕಾರ್ಯಕ್ಕೆ ಉಘೇ ಎಂದಿದ್ದಾರೆ. ‘ಸೂಪರ್ ಮ್ಯಾನ್’ ಎಂದು ಶ್ಲಾಘಿಸಿದ್ದಾರೆ.