ಮಿಲಾನ್: ಅಮೆರಿಕಾದ ಕಪ್ಪು ವರ್ಣೀಯರ ಪರ ಹೋರಾಟ ಈಗ ಇಟಲಿಯಲ್ಲೂ ಸದ್ದು ಮಾಡುತ್ತಿದೆ.
ಇಟಲಿಯ ಪ್ರಸಿದ್ಧ, ಪತ್ರಕರ್ತ ಇಂಡ್ರೊ ಮೌಂಟೆನೆಲ್ಲ ಅವರ ಪ್ರತಿಮೆಗೆ ಪ್ರತಿಭಟನಾಕಾರರು ಶನಿವಾರ ಕೆಂಪು ಬಣ್ಣ ಬಳಿದಿದ್ದು, ಜನಾಂಗೀಯವಾದಿ ಎಂದು ಪ್ರತಿಮೆಯ ಕೆಳಗೆ ಬರೆದಿದ್ದಾರೆ.
ಪಾರ್ಕ್ ನಲ್ಲಿರುವ ಈ ಪ್ರತಿಮೆಗೆ ಬಳಿದ ಬಣ್ಣವನ್ನು ಅಲ್ಲಿನ ನಗರಾಡಳಿತದ ಕಾರ್ಮಿಕರು ಶುದ್ಧ ಮಾಡಿದ್ದು, ಪ್ಲಾಸ್ಟಿಕ್ ನಿಂದ ಮುಚ್ಚಿದ್ದಾರೆ. ಮತ್ತು ಈ ಸಂಬಧ ತನಿಖೆ ನಡೆಸಲು ವಿಶೇಷ ಪೊಲೀಸ್ ತಂಡ ರಚಿಸಲಾಗಿದೆ.
ಈ ನಡುವೆ ಮಿಲಾನ್ ನ ವಿದ್ಯಾರ್ಥಿ ಸಂಘಟನೆಯೊಂದು ಇದರ ಸ್ವತಃ ಜವಾವ್ದಾರಿ ಹೊತ್ತುಕೊಂಡಿದ್ದು, ಬಣ್ಣ ಬಳಿಯುತ್ತಿರುವ ವಿಡಿಯೋಗಳನ್ನು ಬಿಡುಗಡೆ ಮಾಡಿದೆ.
ಮೌಂಟೆನೆಲ್ಲ ಅವರು 12 ವರ್ಷದ ಬಾಲಕಿಯನ್ನು ಮದುವೆಯಾಗಿದ್ದರು ಎಂದು ದೂರಿದೆ. ಅವರ ಪ್ರತಿಮೆಯನ್ನು ತೆರವು ಮಾಡಿ ಪಾರ್ಕ್ ಗೆ ಬೇರೆ ನಾಮಕರಣ ಮಾಡಬೇಕು ಎಂದು ಒತ್ತಾಯಿಸಿದೆ. ಅಲ್ಲದೆ, ಇಟಲಿಯಲ್ಲಿ ಹುಟ್ಟಿದವರಿಗೆ ಇಲ್ಲಿನ ನೇರ ಪೌರತ್ವ ನೀಡಬೇಕು ಎಂದು ಹೋರಾಟಗಾರರು ಬೇಡಿಕೆ ಇಟ್ಟಿದ್ದಾರೆ. ಮಿಲಾನ್ ಮೇಯರ್ ಜ್ಯುಸೆಪ್ ಸಾಲ ಅವರು ಈ ಸಂಬಂಧ ವಿಡಿಯೋ ಹೇಳಿಕೆಯೊಂದನ್ನು ಫೇಸ್‌ಬುಕ್ ನಲ್ಲಿ ಬಿಡುಗಡೆ ಮಾಡಿ, ಪ್ರತಿಮೆ ತೆರವು ಮಾಡುವುದಿಲ್ಲ ಎಂದಿದ್ದಾರೆ.
“ಮೌಂಟೆನೆಲ್ಲ ಅವರು 12 ವರ್ಷದ ಬಾಲಕಿಯನ್ನು ಮದುವೆಯಾಗಿದ್ದನ್ನು ಸ್ವತಃ ಒಪ್ಪಿಕೊಂಡಿದ್ದರು ನಿಜ. ಆದರೆ, ಅವರ ಇಡೀ ಜೀವನದ ಸಾಧನೆ ಅದಕ್ಕಿಂತ ದೊಡ್ಡದು. ಅವರು, ಒಬ್ಬ ಪತ್ರಕರ್ತನಾಗಿ ರಾಜ್ಯದ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. 1977 ರಲ್ಲಿ ರೆಡ್ ಬ್ರಿಗೇಡ್ ನವರು ಅವರ ಕಾಲಿಗೆ ಗುಂಡು ಹೊಡೆದಿದ್ದರು” ಎಂದು ನೆನಪಿಸಿಕೊಂಡಿದ್ದಾರೆ.
ಮೌಂಟೆನೆಲ್ಲ ಅವರು ಪ್ರಸಿದ್ಧ ವಿದೇಶಿ ವಿದ್ಯಮಾನ ಹಾಗೂ ಯುದ್ದ ವಿಷಯ ವರದಿಗಾರರಾಗಿದ್ದರು. 2000 ರಲ್ಲಿ ವಿಯೆನ್ನಾ ಮೂಲದ ಅಂತಾರಾಷ್ಟ್ರೀಯ ಮುದ್ರಣ ಸಂಘಟನೆಯಿಂದ ಅವರನ್ನು ಗೌರವಿಸಲಾಗಿತ್ತು. 2001 ರಲ್ಲಿ ತಮ್ಮ 92 ವಯಸ್ಸಿನಲ್ಲಿ ಕೊನೆಯುಸಿರೆಳೆದರು.