ಮಹಾಮಾರಿ ಕೊರೊನಾಕ್ಕೆ ಲಸಿಕೆ ಹುಡುಕುವುದರಲ್ಲೇ ಭಾರಿ ತಲೆಕೆಡಿಸಿಕೊಂಡಿದ್ದ ಇಡೀ ವಿಶ್ವಕ್ಕೆ ಇದೀಗ ಕೊಂಚ ರಿಲೀಫ್ ಸಿಕ್ಕಿದ್ದು, ಸೋಂಕಿನ ವಿರುದ್ಧದ ಹೋರಾಟದಲ್ಲಿ ಇದು ದೊಡ್ಡ ಪ್ರಗತಿ ಎಂದೇ ಹೇಳಲಾಗಿದೆ. ಕೊರೋನಾ ಸೋಂಕು ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ.
ಅತ್ಯಂತ ಕಡಿಮೆ ಬೆಲೆಗೆ ಸಿಗುವ ಡೆಕ್ಸಮೆಥಾಸೊನ್ (Dexamethasone) ಎಂಬ ಔಷಧವನ್ನು ರೋಗಿಗೆ ನೀಡಿದರೆ ಗುಣವಾಗುವ ಸಾಧ್ಯತೆ ಹೆಚ್ಚು ಎಂದು ಆಕ್ಸ್‌ಫರ್ಡ್ ವಿವಿ ಹೇಳಿದೆ.
ಡೆಕ್ಸಮೆಥಾಸೊನ್ ನೀಡಿದ್ದರಿಂದ ಇಂಗ್ಲೆಂಡ್‌ನಲ್ಲಿ ಸಾವಿನ ದವಡೆಯಲ್ಲಿದ್ದ ಸುಮಾರು 5 ಸಾವಿರ ರೋಗಿಗಳನ್ನು ಪಾರು ಮಾಡಲಾಗಿದೆ. 20 ರೋಗಿಗಳ ಪೈಕಿ 19 ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಇತರೆ ರೋಗಗಳಿಂದಾಗಿ ಹೈರಿಸ್ಕ್ ನಲ್ಲಿರುವ ರೋಗಿಗಳಿಗೆ ವೆಂಟಿಲೇರ್ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ತಂಡದ ಸದಸ್ಯರೊಬ್ಬರು ಮಾತನಾಡಿದ್ದು, ಈ ಔಷಧದಿಂದ ಲಾಭವಿದೆ. ಒಂದು ಡೆಕ್ಸಮೆಥಾಸೊನ್ ಗೆ 5 ಪೌಂಡ್(481 ರೂ.) ಖರ್ಚಾಗಬಹುದು. ಹೀಗಾಗಿ 10 ದಿನಗಳಿಗೆ 35 ಪೌಂಡ್(3,400 ರೂ.) ಆಗಬಹುದು. ಈ ಡ್ರಗ್ಸ್ ವಿಶ್ವದೆಲ್ಲೆಡೆ ಲಭ್ಯವಿದೆ. ವಿಶೇಷವಾಗಿ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.