ದಕ್ಷಿಣ ಮೆಕ್ಸಿಕೋದ ವ್ಯಾಪ್ತಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು ಕನಿಷ್ಠ ಐದು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಕಟ್ಟಡಗಳಿಗೆ ಹಾನಿಯಾಗಿದೆ.
ರೆಸಾರ್ಟ್ ಹೂವಾಟೊಲ್ಕೋ ನಗರ ಕೇಂದ್ರೀಕೃತವಾಗಿ ಪ್ರಬಲ ಭೂಕಂಪ ಉಂಟಾಗಿದೆ. ಮೆಕ್ಸಿಕೋ ನಗರ ಸೇರಿದಂತೆ ಹಲವೆಡೆ ಜನ ಭಯಭೀತರಾಗಿದ್ದಾರೆ. ಕಟ್ಟಡಗಳಿಂದ ಹೊರಬಂದ ಅಪಾರ ಸಂಖ್ಯೆಯ ಜನ ಆತಂಕದಿಂದ ತಮಗಾದ ಅನುಭವ ಹೇಳಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಗಳ ಪ್ರಕಾರ ಐದು ಮಂದಿ ಸಾವನ್ನಪ್ಪಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. 7.4 ತೀವ್ರತೆಯ ಪ್ರಬಲ ಭೂಕಂಪ ಉಂಟಾಗಿ ಹಲವು ಕಟ್ಟಡಗಳಿಗೆ ಹಾನಿಯಾಗಿದೆ ಎಂದು ಮೆಕ್ಸಿಕೋ ಅಧ್ಯಕ್ಷ ಆಂಡರ್ಸ್ ಮ್ಯಾನುಯೆಲ್ ಒಬ್ರೆಡಾರ್ ಮಾಹಿತಿ ನೀಡಿದ್ದಾರೆ.
ವಿವಿಧ ಭಾಗಗಳಲ್ಲಿ ಉಂಟಾದ ಅವಘಡಗಳಲ್ಲಿ ಐವರು ಸಾವನ್ನಪ್ಪಿದ್ದಾರೆ. ಪೆಸಿಫಿಕ್ ಕರಾವಳಿ ನಗರ ಸಲಿನಾ ಕ್ರೂಜ್ ನಲ್ಲಿ ಬೆಂಕಿ ಅವಘಡ ಉಂಟಾಗಿದೆ.
ಚರ್ಚ್, ಸೇತುವೆ ಹೆದ್ದಾರಿಗಳು ಸೇರಿದಂತೆ 140ಕ್ಕೂ ಅಧಿಕ ಪ್ರಮುಖ ಕಟ್ಟಡಗಳಿಗೆ ಹಾನಿಯಾಗಿದೆ. ಈ ಪ್ರದೇಶದಲ್ಲಿ ಅಳವಡಿಸಲಾದ ಭೂಕಂಪದ ಮುನ್ಸೂಚನೆ ನೀಡುವ ಅಲಾರಾಂ ಶಬ್ದ ಗಮನಿಸಿದ ಬಹುತೇಕ ಜನ ಕಟ್ಟಡಗಳಿಂದ ಹೊರಬಂದಿದ್ದಾರೆ ಕರೆಂಟ್ ಇಲ್ಲದ ಕಾರಣ ಹಲವೆಡೆ ಅಲರಾಂಗಳು ಕಾರ್ಯನಿರ್ವಹಿಸಿಲ್ಲ ಎಂದು ಹೇಳಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.