
ಈ ನಡುವೆ ಅಮೆರಿಕದ ಟೆಕ್ಸಾಸ್ ಮೂಲದ ಶಸ್ತ್ರಚಿಕಿತ್ಸಕರೊಬ್ಬರು ಕೊರೊನಾ ಸೋಂಕಿತರ ಕುರಿತಾಗಿ ಆಘಾತಕಾರಿ ಮಾಹಿತಿಯೊಂದನ್ನ ಬಿಚ್ಚಿಟ್ಟಿದ್ದಾರೆ.
ಶಸ್ತ್ರಚಿಕಿತ್ಸಕಿ ಕೊರೊನಾದಿಂದ ಚೇತರಿಸಿಕೊಂಡ ರೋಗಿಯ ಶ್ವಾಸಕೋಶದ ಎಕ್ಸ್ ರೇಯನ್ನ ಬಿಡುಗಡೆ ಮಾಡಿದ್ದು ಇದರಲ್ಲಿ ಶ್ವಾಸಕೋಶದ ಸ್ಥಿತಿ ಧೂಮಪಾನಿಯ ಶ್ವಾಸಕೋಶಕ್ಕಿಂತ ಕೆಟ್ಟದಾಗಿದೆ ಎಂದು ಡಾ. ಬ್ರಿಟಾನಿ ಬ್ಯಾಂಕ್ಹೆಡ್ ಕೆಂಡಾಲ್ ಹೇಳಿದ್ದಾರೆ.
ಕೊರೊನಾ ಕಾಯಿಲೆ ಆರಂಭವಾದ ದಿನಗಳಿಂದ ಇಲ್ಲಿಯವರೆಗೂ ಕೆಂಡಾಲ್ ಚಿಕಿತ್ಸೆಯನ್ನ ನೀಡುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕೊರೊನಾ ಜಯಿಸಿದವರ ಶ್ವಾಸಕೋಶದ ಎಕ್ಸ್ ರೇಯನ್ನ ಗಮನಿಸಿದ್ದು ಬಹುತೇಕ ಎಲ್ಲರ ಶ್ವಾಸಕೋಶದಲ್ಲಿ ತೀವ್ರವಾದ ಗುರುತು ಕಾಣಸಿಗುತ್ತೆ ಎಂದು ಹೇಳಿದ್ದಾರೆ.
ಕೋವಿಡ್ ನಂತರದ ಶ್ವಾಸಕೋಶವು ನಾನು ನೋಡಿದ ಯಾವುದೇ ಭಯಾನಕ ಧೂಮಪಾನಿಯ ಶ್ವಾಸಕೋಶಕ್ಕಿಂತ ಕೆಟ್ಟ ಸ್ಥಿತಿಯಲ್ಲಿ ಇರುತ್ತೆ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
ಧೂಮಪಾನಿಗಳ ಎಕ್ಸ್ ರೇದಲ್ಲಿ ಶ್ವಾಸಕೋಶವು ಕೊಂಚ ಮಬ್ಬಾಗಿ ಕಾಣುತ್ತದೆ. ಆದರೆ ಕೊರೊನಾ ರೋಗಿಗಳ ಶ್ವಾಸಕೋಶ ಬಿಳಿ ಬಣ್ಣದಲ್ಲಿರುತ್ತೆ. ಇದು ತೀವ್ರವಾದ ಗುರುತಾಗಿದ್ದು ಇದು ದೇಹದಲ್ಲಿನ ಆಮ್ಲಜನಕದ ಕೊರತೆಯನ್ನ ಸೂಚಿಸುತ್ತದೆ. ಇದು ಮುಂದಿನ ದಿನಗಳಲ್ಲಿ ಗುಣಮುಖರಾದವರ ಆರೋಗ್ಯದ ಮೇಲೆ ತೀವ್ರ ತರನಾದ ಪೆಟ್ಟನ್ನ ನೀಡಲಿದೆ ಎಂದು ಕೆಂಡಾಲ್ ಹೇಳಿದ್ದಾರೆ.
ಆರೋಗ್ಯವಂತ ವ್ಯಕ್ತಿಯ ಶ್ವಾಸಕೋಶದ ಎಕ್ಸ್ ರೇದಲ್ಲಿ ಬಹುತೇಕ ಜಾಗದಲ್ಲಿ ಕಪ್ಪು ಬಣ್ಣ ಕಾಣುತ್ತೆ. ಇದು ಶ್ವಾಸಕೋಶದ ಉತ್ತಮ ಸ್ಥಿತಿಯಾಗಿದೆ. ಧೂಮಪಾನಿಗಳ ಶ್ವಾಸಕೋಶದಲ್ಲಿ ಹಾನಿಯನ್ನ ತೋರಿಸುವ ಬಿಳಿ ಕಲೆಗಳು ಅಲ್ಲಲ್ಲಿ ಕಾಣಸಿಗುತ್ತವೆ. ಆದರೆ ಕೊರೊನಾ ರೋಗಿಯ ಶ್ವಾಸಕೋಶ ಸಂಪೂರ್ಣ ಬಿಳಿ ಬಣ್ಣದಲ್ಲಿ ಗೋಚರವಾಗುತ್ತದೆ. ಇದು ಶ್ವಾಸಕೋಶದಲ್ಲಿ ಸಾಕಷ್ಟು ಆಮ್ಲಜನಕ ಪೂರೈಕೆ ಆಗ್ತಿಲ್ಲ ಅನ್ನೋದನ್ನ ಸೂಚಿಸುತ್ತೆ ಎಂದು ಹೇಳಿದ್ರು.