ಸುಮಾರು 30 ವರ್ಷಗಳ ನಂತರ ಗಗನಯಾನಿಗಳ ಶೌಚದ ಕಷ್ಟ ದೂರವಾಗುವ ಕಾಲ ಬಂದಿದೆ. ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(ಐಎಸ್‌ಎಸ್)ನಲ್ಲಿ ಶೀಘ್ರದಲ್ಲಿ ಹೊಸ ಮಾದರಿಯ ಶೌಚಗೃಹವನ್ನು ಅಳವಡಿಸಲಾಗುತ್ತಿದೆ.
ಪುರುಷ ಹಾಗೂ ಸ್ತ್ರಿ ಗಗನಯಾನಿಗಳ ಬಳಕೆಗೆ ಅನುಕೂಲವಾಗುವಂತೆ ಹೊಸ ಶೌಚಗೃಹವನ್ನು ನಾಸಾದ ಸಾರ್ವತ್ರಿಕ ತ್ಯಾಜ್ಯ ನಿರ್ವಹಣಾ ವ್ಯವಸ್ಥೆ (ಯುಡಬ್ಲುಎಂಎಸ್) ಅಭಿವೃದ್ಧಿಪಡಿಸಿದೆ.
1990 ರ ಹೊತ್ತಿನಲ್ಲಿ ಬಾಹ್ಯಾಕಾಶ ನಿಲ್ದಾಣದಲ್ಲಿ ನಿರ್ಮಾಣ ಮಾಡಿದ ಹಳೆಯ ಶೌಚಗೃಹ ವ್ಯವಸ್ಥೆಯನ್ನು ಬದಲಿಸಿ ಹೊಸ ಶೌಚಗೃಹಗಳನ್ನು ಅಳವಡಿಸಲಾಗುವುದು. ಇವು ಬಳಕೆಗೆ ಹೆಚ್ಚು ಅನುಕೂಲಕರವಾಗಿದ್ದು, ಸಮರ್ಪಕವಾಗಿ ಶೌಚ ವಿಲೇವಾರಿ ವ್ಯವಸ್ಥೆಯನ್ನು ಹೊಂದಿದೆ ಎಂದು ನಾಸಾ ಹೇಳಿದೆ. ಹಿಂದಿನ ಶೌಚಗೃಹಗಳ ಬಳಕೆ ತುಂಬಾ ಕಷ್ಟವಾಗಿತ್ತು. ಸ್ವಚ್ಛತೆ ದೊಡ್ಡ ಸವಾಲಿನ ವಿಷಯವಾಗಿತ್ತು. ಎಂದು ನಾಸಾ ವಿಶ್ಲೇಷಣೆ ಮಾಡಿತ್ತು.
ಇದನ್ನು ಪರಿಹರಿಸಿ ಗಗನ ಯಾತ್ರಿಗಳು ಮಲ ಹಾಗೂ ಮೂತ್ರಗಳನ್ನು ಏಕಕಾಲದಲ್ಲಿ ಮಾಡುವ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಶೌಚಕ್ರಿಯೆಯ ಸಂದರ್ಭದಲ್ಲಿ ತೇಲಾಡದಂತೆ ಕಾಲನ್ನು ಭದ್ರವಾಗಿ ಸಿಕ್ಕಿಸಿಕೊಳ್ಳಲು ಹುಕ್ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ವ್ಯವಸ್ಥೆ ಈಗಾಗಲೇ ರಷ್ಯಾದ ಐಎಸ್‌ಎಸ್ ವಿಭಾಗದಲ್ಲಿದೆ.