ಆಂಟಿಗುವಾ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣದ ಪ್ರಮುಖ ಆರೋಪಿ, ಉದ್ಯಮಿ ಮೆಹುಲ್ ಚೋಕ್ಸಿ ಆಂಟಿಗುವಾದಿಂದ ನಾಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಪಿಎನ್ ಬಿ ಸ್ಕ್ಯಾಮ್ ನಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಮೆಹುಲ್ ಚೋಕ್ಸಿ ವೆಸ್ಟ್ ಇಂಡೀಸ್ ದ್ವೀಪರಾಷ್ಟ್ರ ಆಂಟಿಗುವಾ ಸೇರಿದ್ದ. ಆದರೆ ಕಳೆದ ಎರಡು ದಿನಗಳಿಂದ ಚೋಕ್ಸಿ ಆಂಟಿಗುವಾದಿಂದ ನಾಪತ್ತೆಯಾಗಿದ್ದು, ಆತನ ಕಾರು ಬಂದರು ಪ್ರದೇಶದಲ್ಲಿ ಪತ್ತೆಯಾಗಿದೆ. ಮೆಹುಲ್ ಚೋಕ್ಸಿಗಾಗಿ ಸ್ಥಳೀಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ವಜ್ರದ ವ್ಯಾಪಾರಿಗಳಾಗಿದ್ದ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 13,500 ಕೋಟಿ ರೂಪಾಯಿ ವಂಚಿಸಿ ಪರಾರಿಯಾಗಿದ್ದರು. ಲಂಡನ್ ಜೈಲಿನಲ್ಲಿದ್ದ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲಾಗಿದೆ. ಇದೀಗ ಆಂಟಿಗುವಾದಲ್ಲಿದ್ದ ಮೆಹುಲ್ ಚೋಕ್ಸಿ ಏಕಾಏಕಿ ನಾಪತ್ತೆಯಾಗಿದ್ದು, ಆತನ ಕಾರು ಬಂದರು ಪ್ರದೇಶದಲ್ಲಿ ಪತ್ತೆಯಾಗಿರುವುದು ಆತನ ಕುಟುಂಬಸ್ಥರಲ್ಲಿ ಆತಂಕ ಮನೆ ಮಾಡಿದೆ.