ಪಿಜ್ಜಾ ಆರ್ಡರ್ ಮಾಡಬೇಕು ಎಂದು ನಿಮಗೆ ಅನಿಸಿದ ಸಂದರ್ಭದಲ್ಲಿ ಇದೇ ಆಲೋಚನೆ ಜಗತ್ತಿನಲ್ಲಿ ಅದೆಷ್ಟು ಮಂದಿಗೆ ಬಂದಿರಬಹುದು? ಭಾರತವೂ ಸೇರಿದಂತೆ ಜಗತ್ತಿನ ಹೆಚ್ಚಿನ ಜಾಗಗಳಲ್ಲಿ ಜನರು ಅತ್ಯಧಿಕವಾಗಿ ಆರ್ಡರ್ ಮಾಡುವ ಖಾದ್ಯ ಪಿಜ್ಜಾ ಆಗಿದೆ ಎಂದು ಸಂಶೋಧನೆ ತಿಳಿಸುತ್ತದೆ.
ಬ್ರಿಟನ್ ಮೂಲದ ಮನಿಬೀಚ್ ಅನಲಿಟಿಕ್ಸ್ ಸಂಸ್ಥೆ ನಡೆಸಿದ ಅಧ್ಯಯನದಲ್ಲಿ, ಜಗತ್ತಿನಾದ್ಯಂತ ಅತ್ಯಂತ ಹೆಚ್ಚು ಆರ್ಡಡ್ ಮಾಡಲ್ಪಟ್ಟ ಖಾದ್ಯ ಪಿಜ್ಜಾ ಆಗಿದೆ. ಭಾರತ, ಅರ್ಜೆಂಟೀನಾ, ಈಜಿಪ್ಟ್, ಫ್ರಾನ್ಸ್, ಫಿನ್ಲೆಂಡ್, ಮೊರಕ್ಕೋ, ಸ್ಪೇನ್, ಜರ್ಮನಿ, ದಕ್ಷಿಣ ಕೊರಿಯಾಗಳಲ್ಲಿ ಪಿಜ್ಜಾವನ್ನು ಮನೆಗೆ ತರಿಸಿಕೊಂಡು ತಿನ್ನುವ ಟ್ರೆಂಡ್ ಜಾಸ್ತಿ ಇದೆ ಎಂದು ಸಮೀಕ್ಷೆ ತಿಳಿಸುತ್ತದೆ.
ಗೂಗಲ್ ನೆರವಿನಿಂದ ಸಂಗ್ರಹಿಸಿದ ದತ್ತಾಂಶದ ನೆರವಿನಿಂದ ಮನಿಬೀಚ್ ಈ ಮಾಹಿತಿ ಕೊಟ್ಟಿದೆ. ಜಗತ್ತಿನಾದ್ಯಂತ 44 ದೇಶಗಳಲ್ಲಿ ಸರ್ಚ್ ಮಾಡಲ್ಪಡುವ ಖಾದ್ಯಗಳಲ್ಲಿ ಪಿಜ್ಜಾವೇ ಟಾಪ್‌ನಲ್ಲಿದೆ. ನಂತರದ ಸ್ಥಾನದಲ್ಲಿ ಚೈನೀಸ್ ಆಹಾರ ಇದೆ.
ಇಟಲಿನ ನೇಪಲ್ಸ್ ಪ್ರದೇಶದಲ್ಲಿ 18ನೇ ಶತಮಾನದ ಸಂದರ್ಭದಲ್ಲಿ ನೌಕರ ವರ್ಗವು ಆವಿಷ್ಕರಿಸಿದ ಈ ಸಿಂಪಲ್ ಖಾದ್ಯವು ಈಗ ಜಾಗತಿಕ ಮಟ್ಟದಲ್ಲಿ ದೊಡ್ಡ ಹಿಟ್ ಆಗಿದೆ. ಈಗ ಪಿಜ್ಜಾ ಇಟಲಿಗೆ ಮಾತ್ರವೇ ಸೀಮಿತವಾಗಿರದೇ, ಎಲ್ಲಾ ದೇಶಗಳಲ್ಲೂ ಥರಾವರಿ ವರ್ಶನ್‌ಗಳಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಜಾಗತೀಕರಣದ ಇಂದಿನ ಯುಗದಲ್ಲಿ ಡೊಮಿನೋಸ್, ಪಿಜ್ಜಾ ಹಟ್‌ನಂಥ ಡೆಲಿವರಿ ಚೈನ್‌ಗಳು ಜನಸಾಮಾನ್ಯರ ಕೈಗೆಟುಕುವಷ್ಟು ದರದಲ್ಲಿ ಪಿಜ್ಜಾ ಸಿಗುವಂತೆ ಮಾಡಿವೆ.