ಅದು 1912 ರ ಏಪ್ರಿಲ್ 14ರ ರಾತ್ರಿ. 2208 ಜನರನ್ನು ಹೊತ್ತ ಬೃಹತ್ ಹಡಗು ಇಂಗ್ಲೆಂಡಿನಿಂದ ನ್ಯೂಯಾರ್ಕ್ ಕಡೆಗೆ ಹೋಗುತ್ತಿತ್ತು.
ಸಮುದ್ರ ಮಾರ್ಗದಲ್ಲಿ ಸಾಗುತ್ತಿದ್ದ ಟೈಟಾನಿಕ್, ಬೆಳಗಿನ ಜಾವದಲ್ಲಿ ಬೃಹತ್ ಹಿಮಬಂಡೆಗೆ ಡಿಕ್ಕಿಯಾಗಿ 700 ಮಂದಿ ಮೃತಪಟ್ಟಿದ್ದರು. ಹಡಗೂ ಮುಳುಗಿತ್ತು.
ಇದು ಇತಿಹಾಸದ ಘಟನೆ. ಈ ದುರ್ಘಟನೆ ಆಧರಿಸಿದ ಟೈಟಾನಿಕ್ ಚಿತ್ರದಲ್ಲಿ ಎಲ್ಲವೂ ಕಣ್ಣೆದುರು ಬರುವಂತೆ ಮಾಡಲಾಗಿದೆ.
ವಿಷಯ ಅದಲ್ಲ. ಈಗ ಟೈಟಾನಿಕ್ ಹಡಗನ್ನೇ ಮುಳುಗಿಸಿದ ದೈತ್ಯ ಮಂಜುಗಡ್ಡೆ ಫೋಟೋ ಪತ್ತೆಯಾಗಿದೆ.
ಬರೋಬ್ಬರಿ 108 ವರ್ಷಗಳ ನಂತರ ಇದು 15 ಸಾವಿರ ಡಾಲರ್ ಮೊತ್ತಕ್ಕೆ ಹರಾಜು ಕೂಡ ಆಗಿದೆ.
ಟೈಟಾನಿಕ್ ಸಾಗುತ್ತಿದ್ದ ಮಾರ್ಗದಲ್ಲಿಯೇ ಎರಡು ದಿನಗಳ ಹಿಂದೆ ಅಂದರೆ, 1912 ರ ಏಪ್ರಿಲ್ 13 ರಂದು ಬೇರೊಂದು ಹಡಗಿನ ಕ್ಯಾಪ್ಟನ್ ಡಬ್ಲ್ಯು.ವುಡ್ ಎಂಬಾತ ಹೆಬ್ಬಂಡೆಯ ಫೋಟೋ ಕ್ಲಿಕ್ಕಿಸಿದ್ದರು. ನ್ಯೂಯಾರ್ಕ್ ತಲುಪುವುದರೊಳಗೆ ಟೈಟಾನಿಕ್ ದುರಂತ ಸಂಭವಿಸಿತ್ತು.
ತಾವು ಅದೇ ದಾರಿಯಲ್ಲಿ ಕಂಡ ಈ ಹಿಮಬಂಡೆಯೇ ದುರಂತಕ್ಕೆ ಕಾರಣ ಎಂದು ಭಾವಿಸಿ, ತಾವು ಕ್ಲಿಕ್ಕಿಸಿದ್ದ ಫೋಟೋವನ್ನು ಅಭಿವೃದ್ಧಿಪಡಿಸಿ, ತಮ್ಮ ಅಜ್ಜನಿಗೆ ಕಳುಹಿಸಿಕೊಟ್ಟಿದ್ದರು. ಅಲ್ಲದೆ, ದುರಂತಕ್ಕೆ ಕಾರಣವಾದ ಮಂಜುಗಡ್ಡೆ, ತಾವು ಸಾಗಿ ಹೋದ ದಾರಿ ಎಲ್ಲದರ ಬಗ್ಗೆ ಒಂದು ಪತ್ರವನ್ನೂ ಬರೆದಿದ್ದರು. ಈ ಪತ್ರ ಹಾಗೂ ಫೋಟೋವನ್ನು ಹೆನ್ರಿ ಆಲ್ಡ್ರಿಡ್ಜ್ ಹರಾಜಿನಲ್ಲಿ ಕೊಂಡುಕೊಂಡಿದ್ದಾರೆ.