ಯುವಕನ ಜೊತೆ ಟಿಂಡರ್ ಡೇಟ್ಗೆ ಬಂದಿದ್ದ ಯುವತಿ ಮೇಲೆ ಆತನ ನಾಯಿ ದಾಳಿ ನಡೆಸಿದ ಪರಿಣಾಮ ಆಕೆಯ ಮುಖದ ಮೇಲೆ 21 ಹೊಲಿಗೆ ಹಾಕಲಾಗಿದೆ. ಪಿಟ್ ಬುಲ್ ಜಾತಿಯ ಈ ನಾಯಿಯನ್ನ ಸಾಯಿಸಬೇಕು ಅಂತಾ ಕೌನ್ಸಿಲ್ ಹೇಳಿದ್ದು ನಾಯಿ ಮಾಲೀಕ ಕಂಗಾಲಾಗಿದ್ದಾರೆ.
ಆಸ್ಟ್ರೇಲಿಯಾದ ಪರ್ಥ್ ಎಂಬಲ್ಲಿ ನಾಯಿ ಮಾಡಿದ ತಪ್ಪಿಗೆ ಮಾಲೀಕ ವಾಕರ್ ಎಂಬವರು ಕೋರ್ಟ್ಗೆ ಅಲೆಯುವಂತಾಗಿದೆ. ಡೇಟ್ಗೆ ಅಂತಾ ವಾಕರ್ ಮನೆಗೆ ಯುವತಿಯೊಬ್ಬಳು ಬಂದಿದ್ದಳು. ಪಿಟ್ಬುಲ್ ಜಾತಿಯ ನಾಯಿಯನ್ನ ಹೊಂದಿದ್ದ ವಾಕರ್ ನಾನು ನಾಯಿಯನ್ನ ಗೂಡಿಗೆ ಹಾಕುವವರೆಗೂ ಮನೆಗೆ ಪ್ರವೇಶಿಸಬೇಡ ಎಂದೇ ತಾಕೀತು ಮಾಡಿದ್ದ. ಆದರೂ ವಾಕರ್ ಮಾತನ್ನ ಕೇಳದ ಯುವತಿ ಮನೆಯೊಳಕ್ಕೆ ಪ್ರವೇಶ ಮಾಡಿದ್ದಾಳೆ. ಇದರಿಂದ ಆಕ್ರೋಶಗೊಂಡ ನಾಯಿ ಆಕೆಯ ಮೇಲೆ ಅಟ್ಯಾಕ್ ಮಾಡಿ ಮುಖದ ಮೇಲೆ ಗಂಭೀರ ಗಾಯ ಮಾಡಿ ಹಾಕಿತ್ತು. ಇದಾದ ಬಳಿಕ ಯುವತಿ ಮುಖಕ್ಕೆ 21 ಹೊಲಿಗೆ ಹಾಕಿದ್ದು ಮಾತ್ರವಲ್ಲದೇ ಪ್ಲಾಸ್ಟಿಕ್ ಸರ್ಜರಿ ಮಾಡಲಾಗಿದೆ.
ಈ ಪ್ರಕರಣ ಸಂಬಂಧ ಸ್ಥಳೀಯ ಕೌನ್ಸಿಲ್ ವಿಚಾರಣೆ ನಡೆದಿದೆ. ಈ ವೇಳೆ ವಾಕರ್ ಈ ಘಟನೆ ಅಚಾನಕ್ಕಾಗಿ ನಡೆದಿದೆ. ನಾನು ಕೂಡ ನಾಯಿಯಿಂದ ಆಕೆಯನ್ನ ರಕ್ಷಿಸಲಾಗದೇ ಅಸಹಾಯಕನಾಗಿದ್ದೆ ಅಂತಾ ಕ್ಷಮೆಯಾಚಿಸಿದ್ದಾರೆ.
ಆದರೆ ಸ್ಥಳೀಯ ಕೌನ್ಸಿಲ್ ಇಂತಹ ಡೇಂಜರಸ್ ನಾಯಿಗಳನ್ನ ನಾಶ ಮಾಡಬೇಕು ಅಂತಾ ಹೇಳಿದೆ. ಪ್ರೀತಿಯಿಂದ ಸಾಕಿದ ನಾಯಿಯನ್ನ ಕಣ್ಣೆದುರೇ ಕೊಲ್ಲಲಾಗದೇ ವಾಕರ್ ನಾಯಿ ಕಳೆದು ಹೋಗಿದೆ ಅಂತಾ ಹೇಳಿದ್ದಾರೆ. ಸದ್ಯ ಕೋರ್ಟ್ ವಿಚಾರಣೆಯನ್ನ ಮುಂದಿನ ತಿಂಗಳಿಗೆ ಮುಂದೂಡಿದೆ.