ಕೋವಿಡ್-19 ಸೋಂಕಿನಿಂದ ಚೇತರಿಕೆ ಕಂಡ ರೋಗಿಗಳ ದೇಹದಲ್ಲಿ ಈ ವೈರಾಣುವಿನ ವಿರುದ್ಧ ಎಂಟು ತಿಂಗಳ ಮಟ್ಟಿಗೆ ಹೋರಾಡಲು ರೋಗನಿರೋಧಕ ಶಕ್ತಿ ಉತ್ಪತ್ತಿಯಾಗಿರುತ್ತದೆ ಎಂದು ಹೊಸ ಸಂಶೋಧನೆಯೊಂದು ತಿಳಿಸಿದೆ.
ವೈರಾಣುವಿನ ವಿರುದ್ಧದ ರೋಗನಿರೋಧಕ ಶಕ್ತಿಯು ಚೇತರಿಕೆ ಕಂಡ ವ್ಯಕ್ತಿಯಲ್ಲಿ ಮೂರರಿಂದ ಐದು ತಿಂಗಳ ಮಟ್ಟಿಗೆ ಇರುತ್ತದೆ ಎಂದು ಸಾಮಾನ್ಯವಾಗಿ ನಂಬಲಾಗಿತ್ತು. ಆದರೆ ಮೇಲ್ಕಂಡ ಸುದ್ದಿ ತಿಳಿದ ಬಳಿಕ ಕೋವಿಡ್-19 ವಿರುದ್ಧ ಲಸಿಕೆ ಅಭಿವೃದ್ಧಿಪಡಿಸುತ್ತಿರುವ ಸಂಸ್ಥೆಗಳಿಗೆ ಕೊಂಚ ನಿಟ್ಟುಸಿರು ಬಿಡುವಂತೆ ಆಗಿದೆ.
ಅಮೆರಿಕದ ಲಾ ಜೊಲ್ಲಾ ರೋಗನಿರೋಧಕ ಶಕ್ತಿ ಸಂಸ್ಥೆಯ ಸಂಶೋಧಕರು ಅಲೆಸ್ಸಾಂಡ್ರೋ ಸೆಟ್ಟೆ ನೇತೃತ್ವದಲ್ಲಿ ಕೋವಿಡ್-19ನಿಂದ ಚೇತರಿಸಿಕೊಂಡ ರೋಗಿಗಳ ದೇಹದಿಂದ ಮೆಮೋರಿ ಬಿ ಜೀವಕೋಶಗಳು, ಸಹಾಯಕ ಟಿ ಜೀವಕೋಶಗಳು ಹಾಗೂ ವಿಧ್ವಂಸಕ ಟಿ ಜೀವಕೋಶಗಳ ಅಧ್ಯಯನ ಮಾಡಿ, ರೋಗನಿರೋಧಕ ಶಕ್ತಿಯ ಅಂದಾಜು ಮಾಡಿದ್ದಾರೆ.
ಸೋಂಕು ತಗುಲಿದ ಆರಂಭಿಕ ದಿನಗಳಲ್ಲೇ ಸೋಂಕಿತರ ದೇಹದಲ್ಲಿ ಉತ್ಪತ್ತಿಯಾಗುವ ಈ ರೋಗ ನಿರೋಧಕ ಶಕ್ತಿಯು ನಿರ್ದಿಷ್ಟ ವೈರಾಣುಗಳ ವಿರುದ್ಧ ಎಂಟು ತಿಂಗಳ ಮಟ್ಟಿಗೆ ಹೋರಾಡಬಲ್ಲವಾಗಿವೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.