ಮೀಟೂ ಅಭಿಯಾನ ಇಂದು ನಿನ್ನೆಯದಲ್ಲ. ಅದರಲ್ಲೂ ಭಾರತದಲ್ಲಿ ಈ ಮೀಟೂ ಅಭಿಯಾನದಿಂದ ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದಂತೂ ಸತ್ಯ. ಸದ್ಯ ಈ ವಿಚಾರವಾಗಿ ಇಲ್ಲಿಮ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಯಾವಾಗ ಮತ್ತೆ ಬೆಂಕಿ ಎದ್ದೇಳುತ್ತೋ ಗೊತ್ತಿಲ್ಲ.
ಆದರೆ ಈ ಅಭಿಯಾನ ದಕ್ಷಿಣ ಕೊರಿಯಾದಲ್ಲಿ ಮುಂದುವರೆದಿದ್ದು, ಇದೀಗ ಪ್ರಭಾವಿ ರಾಜಕಾರಣಿ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಈ ಆರೋಪದ ಬೆನ್ನಲ್ಲೇ ಇವರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ ಎನ್ನಲಾಗುತ್ತಿದೆ.
ಹೌದು, ದಕ್ಷಿಣ ಕೊರಿಯಾದಲ್ಲಿನ ಸಿಯೋಲ್ ನಗರದ ಮೇಯರ್ ಪಾರ್ಕ್ ವೋನ್ ಸೂನ್ ಮೇಲೆ ಅವರ ಮಾಜಿ ಕಾರ್ಯದರ್ಶಿ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಜೊತೆಗೆ ಪೊಲೀಸ್ ದೂರು ಕೂಡ ಸಲ್ಲಿಸಿದ್ದರು. ಇದೀಗ ಈ ಆರೋಪ ಕೇಳಿ ಬಂದ ಬೆನ್ನಲ್ಲೇ ವೋನ್ ಸೂನ್ ಮೃತದೇಹ ನಗರದ ಬೆಟ್ಟದಲ್ಲಿ ಪತ್ತೆಯಾಗಿದೆ.
ಇನ್ನು ವೋನ್ ಸೂನ್ ಅವರ ಅಧಿಕೃತ ನಿವಾಸದಲ್ಲಿ ಡೆತ್ ನೋಟ್ ಕೂಡ ಸಿಕ್ಕಿದೆ. ಈ ಲೆಟರ್‌ನಲ್ಲಿ ಎಲ್ಲರಿಗೂ ಕ್ಷಮೆ ಯಾಚಿಸಿರುವ ಇವರು, ಅನೇಕ ಮಂದಿಗೆ ಧನ್ಯವಾದ ಅರ್ಪಿಸಿದ್ದಾರೆ. ಅದೇ ರೀತಿ ತನ್ನ ಅಂತ್ಯ ಸಂಸ್ಕಾರದ ಬಗ್ಗೆಯೂ ಹೇಳಿದ್ದಾರೆ. ಅಂತ್ಯ ಸಂಸ್ಕಾರದ ನಂತರ ತನ್ನ ಚಿತಾಭಸ್ಮವನ್ನು ಹೆತ್ತವರ ಸಮಾಧಿ ಬಳಿ ಹಾಕಿ ಎಂದಿದ್ದಾರೆ. ಆದರೆ ಆರೋಪಗಳ ಬಗ್ಗೆ ಡೆತ್ ನೋಟ್‌ನಲ್ಲಿ ಉಲ್ಲೇಖಿಸಿಲ್ಲ.