ಗಾಲಿಕುರ್ಚಿ ಮೇಲೆ ಕುಳಿತುಕೊಂಡೇ ಬೆಟ್ಟಗುಡ್ಡಗಳನ್ನು ಏರುವ ಹಾಂಕಾಂಗ್‌ನ ಲಾಯಿ-ಚೀ, 250 ಮೀಟರ್ ಎತ್ತರದ ಗಗನಚುಂಬಿ ಕಟ್ಟಡವೊಂದನ್ನು ಏರುವ ಮೂಲಕ ಬೆನ್ನು ಹುರಿ ಸಮಸ್ಯೆ ಇರುವ ರೋಗಿಗಳ ಶುಶ್ರೂಷೆಗೆ ನಿಧಿ ಸಂಗ್ರಹಿಸಲು ಮುಂದಾಗಿದ್ದಾರೆ.
ಹತ್ತು ವರ್ಷಗಳ ಹಿಂದೆ ಘಟಿಸಿದ ಕಾರು ಅಫಘಾತದಲ್ಲಿ ತಮ್ಮ ಕೆಳದೇಹದ ಸ್ವಾಧೀನ ಕಳೆದುಕೊಂಡಿರುವ 37 ವರ್ಷದ ಈ ಕ್ಲೈಂಬರ್, ಇಲ್ಲಿನ ಕೌಲೂನ್ ಪೆನೆನ್ಸುಲಾ ಪ್ರದೇಶದಲ್ಲಿರುವ 300 ಮೀಟರ್ ಎತ್ತರದ ನಿನಾ ಟವರ್ ಏರಲು ಮುಂದಾಗಿದ್ದರು. 10 ಗಂಟೆಗಳ ನಿರಂತರ ಶ್ರಮದ ಬಳಿಕ ಅವರು 250 ಮೀಟರ್ ಎತ್ತರಕ್ಕೆ ಏರಲು ಶಕ್ತರಾಗಿದ್ದಾರೆ.
ರಾಕ್ ಕ್ಲೈಂಬರ್ ಆಗಿ ಜಾಗತಿಕ ಮಟ್ಟದಲ್ಲಿ ಎಂಟನೇ ರ‍್ಯಾಂಕ್‌ನಲ್ಲಿದ್ದ ಲಾಯ್, ತಮ್ಮ ಈ ಇವೆಂಟ್‌ನಿಂದ ಒಟ್ಟಾರೆ $670,739 ಸಂಗ್ರಹಿಸಲು ಸಫಲರಾಗಿದ್ದಾರೆ.
ಅಪಘಾತವಾದ ಬಳಿಕವೂ ತಮ್ಮ ಕ್ಲೈಂಬಿಗ್ ಚಟುವಟಿಕೆ ಬಿಟ್ಟುಕೊಡದ ಲಾಯ್, ಗಾಲಿಕುರ್ಚಿ ಮೇಲೆ ಕುಳಿತುಕೊಂಡು ಪುಲ್ಲರ್ ವ್ಯವಸ್ಥೆಯ ನೆರವಿನಿಂದ ಕ್ಲೈಂಬಿಂಗ್ ಮಾಡುವುದನ್ನು ಮುಂದುವರೆಸಿದ್ದಾರೆ. ಐದು ವರ್ಷಗಳ ಹಿಂದೆ ಇದೇ ಲಾಯ್ 495 ಮೀಟರ್ ಎತ್ತರ ಲಯನ್ ರಾಕ್ ಬೆಟ್ಟವನ್ನು ಏರಿದ್ದರು.