ಇಸ್ಲಾಮಾಬಾದ್: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡುವುದರ ಮೇಲೆ ನಿಗಾ ವಹಿಸುವ ಅಂತರಾಷ್ಟ್ರೀಯ ಮಟ್ಟದ ಸಂಸ್ಥೆಯಾಗಿರುವ ಎಫ್ಎಟಿಎಫ್ ನ ಬೂದು ಪಟ್ಟಿಯಲ್ಲಿ ಗುರುತಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳಲು ಪಾಕಿಸ್ತಾನ ಉಗ್ರರ ವಿರುದ್ಧ ಕ್ರಮಕ್ಕೆ ಮುಂದಾಗಿದೆ.
ಭಾರತದ ಮೋಸ್ಟ್ ವಾಂಟೆಡ್ ದಾವೂದ್ ಇಬ್ರಾಹಿಂ, ಮಸೂದ್ ಅಜರ್, ಹಫೀಜ್ ಸೈಯದ್ ಸೇರಿದಂತೆ 88 ಉಗ್ರ ಸಂಘಟನೆಗಳು ಮತ್ತು ಅವುಗಳ ಲೀಡರ್ ಗಳ ಮೇಲೆ ಕಠಿಣ ನಿರ್ಬಂಧ ವಿಧಿಸಿದೆ. ಮಸೂದ್ ಅಜರ್, ದಾವೂದ್ ಇಬ್ರಾಹಿಂ ಹಾಗೂ ಹಫೀಜ್ ಸೈಯದ್ ಸೇರಿದಂತೆ ಹಲವು ಉಗ್ರ ನಾಯಕರ ಬ್ಯಾಂಕ್ ಖಾತೆ, ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ.
ಈ ಆದೇಶದಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ದಾವೂದ್ ಇಬ್ರಾಹಿಂ ಇರುವುದಾಗಿ ತಿಳಿಸಲಾಗಿದೆ. ಇದುವರೆಗೂ ದಾವೂದ್ ಇಲ್ಲವೆಂದು ಹೇಳುತ್ತಿದ್ದ ಪಾಕ್ ಈಗ ಅಧಿಕೃತವಾಗಿ ಒಪ್ಪಿಕೊಂಡಂತಾಗಿದೆ.
ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡಲು ಕಡಿವಾಣ ಹಾಕುವಂತೆ ಅನೇಕ ಸೂಚನೆ ನೀಡಿದರೂ ಪಾಕಿಸ್ತಾನ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಎಫ್ಎಟಿಎಫ್ ಬೂದು ಪಟ್ಟಿಗೆ ಸೇರಿಸಿತ್ತು. ಉಗ್ರರಿಗೆ ಆರ್ಥಿಕ ನೆರವು ನಿಲ್ಲಿಸುವಂತೆ ಕಠಿಣ ಸೂಚನೆ ನೀಡಿತ್ತು. ಈಗ ಪಾಕಿಸ್ತಾನ ಉಗ್ರ ಸಂಘಟನೆಗಳಾದ ಲಷ್ಕರ್-ಇ-ತೋಯ್ಬಾ, ಜೈಶ್-ಇ-ಮೊಹಮ್ಮದ್ ಸೇರಿದಂತೆ ಹಲವು ಉಗ್ರ ಸಂಘಟನೆಗಳು ಮತ್ತು ನಾಯಕರಿಗೆ ನಿರ್ಬಂಧ ವಿಧಿಸಿದೆ ಎಂದು ಹೇಳಲಾಗಿದೆ.