ಪೆಟ್ರೋಲ್ ಅಭಾವದ ಬಗ್ಗೆ ಪಾಕಿಸ್ತಾನ ಟಿವಿ ವರದಿಗಾರನೊಬ್ಬ ಸಾರ್ವಜನಿಕರನ್ನು ಮಾತನಾಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ. ವರದಿಗಾರನ ಪರಿಸ್ಥಿತಿಯ ಬಗ್ಗೆ ನೆಟ್ಟಿಗರು, “ದುರದೃಷ್ಟಕರ” ಹಾಗೂ “ವಿಷಾದನೀಯ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಏಕೆ ಎಂಬುದಕ್ಕೆ ಈ ಸ್ಟೋರಿ ಓದಿ.
“ಎಆರ್ವೈ ನ್ಯೂಸ್ ರಿಪೋರ್ಟರ್ ಅದ್ನಾನ್ ರಫಿಕ್ ಅವರಿಗೆ ನಾನು ಪ್ರಾಮಾಣಿಕವಾಗಿ ಸಾರಿ ಹೇಳಬಯಸುತ್ತೇನೆ-ಏಕೆ ಎಂದು ಅರ್ಥವಾಗಬೇಕು ಎಂದರೆ ನೀವು ಈ ವಿಡಿಯೋವನ್ನು ಅಂತ್ಯದವರೆಗೂ ನೋಡಿ” ಎಂಬ ಟ್ಯಾಗ್ ಲೈನ್ ಹಾಗೂ #ಕೋವಿಡ್ -19 #ಪಾಕಿಸ್ತಾನ್ ಎಂದು ಹ್ಯಾಶ್ ಟ್ಯಾಗ್ ಬಳಸಿ ಪಾಕ್ ಪತ್ರಕರ್ತ ಹಾಗೂ ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕ ಅನಾಸ್ ಮಲ್ಲಿಕ್ ಟ್ವೀಟ್ ಮಾಡಿದ್ದಾರೆ. ಜು.19 ರಂದು 12.57 ಕ್ಕೆ ಅಪ್ ಲೋಡ್ ಆದ ವಿಡಿಯೋವನ್ನು ಇದುವರೆಗೆ 82 ಸಾವಿರ ಜನರು ವೀಕ್ಷಿಸಿದ್ದಾರೆ. 1.7 ಸಾವಿರ ಜನರು ಲೈಕ್ ಮಾಡಿದ್ದಾರೆ. ಹಲವರು ವರದಿಗಾರನ ಪರಿಸ್ಥಿತಿಗೆ ನೊಂದುಕೊಂಡು ಕಮೆಂಟ್ ಮಾಡಿದ್ದಾರೆ.
ಆಗಿದ್ದೇನು..?
ಪೇಶಾವರದಲ್ಲಿ ಉಂಟಾಗುತ್ತಿರುವ ಪೆಟ್ರೋಲ್ ಅಭಾವದ ಬಗ್ಗೆ ಎಆರ್ವೈ ನ್ಯೂಸ್ ರಿಪೋರ್ಟರ್ ಮಾಸ್ಕ್ ಧರಿಸದೇ ಫೇಸ್ ಟು ಕ್ಯಾಮರಾ (ಪಿಟುಸಿ) ನೀಡುತ್ತಿದ್ದ. “ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಇನ್ನು ಪೆಟ್ರೋಲ್ ಇದೆ ಎಂಬಲ್ಲಿಯೂ ಉದ್ದದ ಸರದಿ ಸಾಲು ಕಂಡುಬರುತ್ತಿದೆ” ಎಂದು ಕ್ಯಾಮರಾ ಎದುರು ಹೇಳಿ ಜನರನ್ನು ಮಾತನಾಡಿಸಲು ತಿರುಗುತ್ತಾನೆ.
ಆತನ ಹಿಂದೆ ಪೆಟ್ರೋಲ್ ಹಾಕಿಸಲು ಮಾಸ್ಕ್ ಧರಿಸದೇ ನಿಂತಿದ್ದ ವ್ಯಕ್ತಿಯ ಬಾಯಿ ಸಮೀಪ ಲೋಗೋ(ಟಿವಿ ವರದಿಗಾರರು ಬಳಸುವ ಮೈಕ್) ಹಿಡಿದು ಈ ಕುರಿತು ಮಾತನಾಡಿಸುತ್ತಾನೆ. ಆ ವ್ಯಕ್ತಿ “ಹೌದು ಪೇಶಾವರದಲ್ಲಿ ಪೆಟ್ರೋಲ್ ಸಿಗುತ್ತಿಲ್ಲ. ಬಹಳ ಕೆಟ್ಟ ಪರಿಸ್ಥಿತಿ ಇದೆ. ನಾನು ಕೊರೊನಾ ಪಾಸಿಟಿವ್ ಪೇಶಂಟ್ ಆಸ್ಪತ್ರೆಗೆ ಹೋಗುತ್ತಿದ್ದೇನೆ” ಎಂದು ಉತ್ತರಿಸುತ್ತಿದ್ದಂತೆ ವರದಿಗಾರ ಕಂಗಾಲು…!