
ಮಹಿಳೆಯರ ಬಗ್ಗೆ ಏನೇ ಮಾತನಾಡಿದರೂ, ಬರೆದರೂ ಸಹ ವಿವಾದವಾಗುವ ಸಾಧ್ಯತೆಗಳು ಯಾವಾಗಲೂ ಇದ್ದೇ ಇರುತ್ತದೆ. ಇದೀಗ ಆಕ್ಸ್ಫರ್ಡ್ ವಿವಿ ತನ್ನ ಪದಕೋಶದಲ್ಲಿ ಇರುವ ’ಬಿಚ್, ಬಿಂಟ್ ಹಾಗೂ ವೆಂಚ್’ ಎಂಬ ಪದಗಳು ಮಹಿಳೆಯರನ್ನು ಅವಮಾನ ಮಾಡುವಂತೆ ಇವೆ ಎಂದು ಟೀಕೆಗಳು ಕೇಳಿ ಬಂದ ಮೇಲೆ, ಅವುಗಳ ವಿಶ್ಲೇಷಣೆಯಲ್ಲಿ ಬದಲಾವಣೆ ಮಾಡಿದೆ.
ಪರಿಷ್ಕರಿಸಲಾದ ಶಬ್ದಕೋಶದಲ್ಲಿ ಮಹಿಳೆಯೊಬ್ಬಳು ಪುರುಷನೊಬ್ಬನ ಮಡದಿ, ಗರ್ಲ್ಫ್ರೆಂಡ್, ಪ್ರೇಮಿಯಾಗಿಯೂ ಇರಬಹುದು ಎಂದು ಮಾರ್ಪಾಡು ಮಾಡಲಾಗಿದೆ. ಇದೇ ವೇಳೆ ಪುರುಷರಿಗೆ ಸಂಬಂಧಿಸಿದ ಪದಗಳ ಅರ್ಥಗಳನ್ನೂ ಸಹ ಮಾರ್ಪಾಡು ಮಾಡಲಾಗಿದೆ. ಲೈಂಗಿಕ ಆಕರ್ಷಣೆಗೆ ಸಂಬಂಧಿಸಿದ ಪದಗಳ ಅರ್ಥಗಳ ವಿಶ್ಲೇಷಣೆಯನ್ನು ಬೇರೆ ರೀತಿಯಲ್ಲಿ ಕೊಡಲು ಆಕ್ಸ್ಫರ್ಡ್ ಶಬ್ದಕೋಶ ಮುಂದಾಗಿದೆ.
ಮಹಿಳೆಯರಿಗೆ ಸಂಬಂಧಿಸಿದ ಅನೇಕ ಪದಗಳ ಬಗ್ಗೆ ಸಾಕಷ್ಟು ಚರ್ಚೆಗಳು ಕೇಳಿಬರಲಾರಂಭಿಸಿದ ಬಳಿಕ ಈ ಮೇಲ್ಕಂಡ ರೀತಿಯ ಪದಗಳು ಹಾಗೂ ಅವುಗಳ ಅರ್ಥಗಳಿಗೆ ಮಾರ್ಪಾಡು ಮಾಡಲೆಂದು ದೊಡ್ಡ ಮಟ್ಟದಲ್ಲಿ ಪರಿಶೀಲನೆಯನ್ನೇ ಮಾಡಲಾಗಿದೆ ಎಂದು ಆಕ್ಸ್ಫ್ರ್ಡ್ ವಿವಿಯ ಮುದ್ರಣ ವಿಭಾಗ ತಿಳಿಸಿದೆ.