ಐಸ್ಲ್ಯಾಂಡ್: ನೀವು ರಸ್ತೆಯಲ್ಲಿ ನಡೆದು ಹೊರಟಾಗ ದೇಶದ ಪ್ರಧಾನಿ ಎದುರಾದರೆ…? ಅದ್ಹೇಗೆ ಸಾಧ್ಯ…ಬಹುತೇಕ ಯಾವ ದೇಶದಲ್ಲೂ ಇಂಥ ಅವಕಾಶ ಸಿಗಲಿಕ್ಕಿಲ್ಲ.
ಒಂದು ಪ್ರದೇಶಕ್ಕೆ ಪ್ರಧಾನ ಮಂತ್ರಿ ಬರುತ್ತಾರೆ ಎಂದರೆ ಎರಡು ದಿನ ಮುಂಚಿಂದಲೇ ಭದ್ರತಾ ಪರೀಕ್ಷೆ ನಡೆಯುತ್ತದೆ. ಅವರ ಹಿಂದೆ, ಮುಂದೆ ನೂರಾರು ಭದ್ರತಾ ಸಿಬ್ಬಂದಿ ತುಂಬಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ.
ಆದರೆ, ಐಸ್ಲ್ಯಾಂಡ್ ನಲ್ಲಿ ಹಾಗಿಲ್ಲ. ನೀವು ಆ ದೇಶಕ್ಕೆ ಹೋದರೆ, ರಸ್ತೆಯಲ್ಲಿ, ಪಾರ್ಕ್ ಅಥವಾ ಮಾರ್ಕೆಟ್ ನಲ್ಲಿ ಅಲ್ಲಿನ ಪ್ರಧಾನಿ ನಿಮಗೆ ಎದುರಾಗಬಹುದು.
ಹೌದು, ಐಸ್ಲ್ಯಾಂಡ್ ದೇಶದ ಮಹಿಳಾ ಪ್ರಧಾನಿ ಕತ್ರಿನ್ ಜಾಕೊಬ್ಸ್ ಡೋಟಿರ್ ಯಾವುದೇ ಭದ್ರತಾ ಸಿಬ್ಬಂದಿ ಇಲ್ಲದೆ ಅತಿ ಸರಳವಾಗಿ ಸಾಮಾನ್ಯರಂತೆ ನಡೆದುಕೊಂಡು ಹೋಗುತ್ತಾರೆ.
ಮ್ಯಾಕ್ಸ್ ಪೋಸ್ಟರ್ ಎಂಬ ಪತ್ರಕರ್ತ ರಸ್ತೆಯಲ್ಲಿ ನಡೆದು ಹೋಗುವಾಗ ಕತ್ರಿನ್ ಎದುರಾಗಿದ್ದರು. ಅವರೊಟ್ಟಿಗೆ ಹೆಜ್ಜೆ ಹಾಕುತ್ತಲೇ ಮ್ಯಾಕ್ಸ್ ಮಿನಿ ಸಂದರ್ಶನ ಮಾಡಿದ್ದಾರೆ.
“ಐಸ್ಲ್ಯಾಂಡ್ ಗೆ ಹೆಚ್ಚು ಪ್ರವಾಸಿಗರು ಏಕೆ ಬರಬೇಕು.?” ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಪ್ರಧಾನಿ ಕತ್ರಿನ್, “ಪ್ರವಾಸಿಗರ ಭೇಟಿಗೆ ಇದು ಒಳ್ಳೆಯ ಸ್ಥಳ, ಅದಕ್ಕಿಂತ ಹೆಚ್ಚಾಗಿ ಸುಂದರ ಪರಿಸರವಿದೆ. ಅವರ್ಣನೀಯ ತಾಣಗಳಿವೆ” ಎಂದು ಹೇಳಿದ್ದಾರೆ. ಟಿಕ್ ಟಾಕ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ.