ನದಿಗಳ ಬಣ್ಣ ಬದಲಾಗುತ್ತಿರುವ ಲೆಕ್ಕವಿಲ್ಲದಷ್ಟು ವರದಿಗಳನ್ನು ವರ್ಷಗಳಿಂದಲೂ ಓದುತ್ತಲೇ ಬಂದಿದ್ದೇವೆ. ಅಮೆರಿಕದ ನದಿಗಳ ಬಣ್ಣ ಕೆಲವೊಮ್ಮೆ ಹಳದಿ ಹಾಗೂ ಕೆಲವೊಮ್ಮೆ ಹಸಿರಾಗಿ ಕಾಣಿಸಿಕೊಳ್ಳುತ್ತಿದ್ದು ಇದರ ಹಿಂದಿನ ಸತ್ಯವನ್ನು ಅರಿಯಲು ಅಮೆರಿಕ ವಿಜ್ಞಾನಿಗಳು ಮುಂದಾಗಿದ್ದಾರೆ.
ಕಳೆದ 36 ವರ್ಷಗಳಿಂದ ಅಮೆರಿಕದಲ್ಲಿರುವ ನದಿಗಳ ಪೈಕಿ 1/3ರಷ್ಟು ನದಿಗಳ ಬಣ್ಣ ನೀಲಿಯಿಂದ ಹಳದಿ ಅಥವಾ ಹಸಿರಿಗೆ ಬದಲಾಗಿವೆ ಎಂದು ಜಿಯೋಫಿಸಿಕಲ್ ರೀಸರ್ಚ್ ಲೆಟರ್ಸ್ ಹೆಸರಿನ ವೃತ್ತಪತ್ರಿಕೆಯೊಂದರಲ್ಲಿ ವರದಿಯಾಗಿದೆ.
ಇದೇ ವಿಚಾರವಾಗಿ ಆರು ವಿಜ್ಞಾನಿಗಳ ತಂಡವೊಂದು 1984-2018ರ ನಡುವಿನ 34 ವರ್ಷಗಳ ಅವಧಿಯಲ್ಲಿ ಸೆರೆ ಹಿಡಿಯಲಾದ ಉಪಗ್ರಹದ ಚಿತ್ರಗಳನ್ನು ನಾಸಾ ಹಾಗೂ ಅಮೆರಿಕ ಭೂವಿಜ್ಞಾನ ಇಲಾಖೆಯ ನೆರವಿನಿಂದ ಅಧ್ಯಯನ ನಡೆಸಿದ್ದಾರೆ.
ನದಿಗಳು ಜಗತ್ತಿನಲ್ಲೇ ಅತ್ಯಂತ ಹೆಚ್ಚು ಅಪಾಯದಂಚಿನಲ್ಲಿರುವ ಜೈವಿಕ ವ್ಯವಸ್ಥೆಗಳಾಗಿದ್ದು, ಈ ಕುರಿತಂತೆ ಅರಿವು ಮೂಡಿಸಿಕೊಳ್ಳುವುದು ಬಹಳ ಮುಖ್ಯವೆಂದು ಸಂಶೋಧಕರು ವಿವರಿಸಿದ್ದಾರೆ.