ಸಾಂಕ್ರಾಮಿಕ ಕಾಯಿಲೆ ಕೊರೊನಾದಿಂದಾಗಿ ದುಡಿಯುವ ತಾಯಂದಿರು ಹೆಚ್ಚಿನ ಒತ್ತಡ ಅನುಭವಿಸುತ್ತಿದ್ದು, ಬಹುಬೇಗನೆ ಆತಂಕಿತರಾಗುತ್ತಿದ್ದಾರೆ. ಮೈಕ್ರೋಸಾಫ್ಟ್ ಒಡೆತನದ ಲಿಂಕ್ಡ್ ಇನ್ ವತಿಯಿಂದ ನಡೆದ ವರ್ಕ್ ಫೋರ್ಸ್ ಕಾನ್ಫಿಡೆನ್ಸ್ ಇನ್ಡೆಕ್ಸ್ ಸಮೀಕ್ಷೆ ಪ್ರಕಾರ, ಪ್ರತಿ ಐವರಲ್ಲಿ ಒಬ್ಬ ತಂದೆ ಕಚೇರಿ ಕೆಲಸ ಮಾಡಿಕೊಂಡು ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಹೊರುತ್ತಿದ್ದರೆ, ಪ್ರತಿ ಮೂವರಲ್ಲಿ ಓರ್ವ ತಾಯಿ ಈ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಇದರಿಂದ ಹೆಚ್ಚಿನ ಒತ್ತಡಕ್ಕೆ ಸಿಲುಕುತ್ತಿದ್ದಾರೆ.
ಇಷ್ಟು ದಿನ ಗಂಡ-ಹೆಂಡತಿ ಇಬ್ಬರೂ ಕೆಲಸಕ್ಕೆ ಹೋಗುವುದಿದ್ದರೆ, ಮಕ್ಕಳನ್ನು ನೆಂಟರಿಷ್ಟರ ಮನೆ, ಮನೆಯಲ್ಲೇ ಇರುವ ಸಂಬಂಧಿಕರು, ಪಾಲನಾ ಕೇಂದ್ರದಲ್ಲಿ ಬಿಟ್ಟು ತೆರಳುತ್ತಿದ್ದರು. ಆದರೀಗ ಪಾಲನಾ ಕೇಂದ್ರಗಳು ಇಲ್ಲದೇ ಇರುವುದರಿಂದ ಕಚೇರಿಯ ಕೆಲಸ, ಮನೆಯ ಕೆಲಸದೊಂದಿಗೆ ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆ ಗಂಡ-ಹೆಂಡತಿ ಮೇಲೆ ಬಿದ್ದಿದೆ. ಅದರಲ್ಲೂ ಈ ಸಂದರ್ಭದಲ್ಲಿ ಮಹಿಳೆಯರು ಹೆಚ್ಚಿನ ಒತ್ತಡಕ್ಕೊಳಗಾಗುತ್ತಿದ್ದಾರೆ
ಒಟ್ಟಾರೆ 2,254 ಮಹಿಳೆಯರನ್ನು ಸಮೀಕ್ಷೆಗೆ ಒಳಪಡಿಸಿದ್ದು, ಈ ಪೈಕಿ ಪ್ರತಿ ಎರಡು ತಾಯಂದಿರಲ್ಲಿ ಒಬ್ಬರು ದಿನಪೂರ್ತಿ ಮಕ್ಕಳನ್ನು ನೋಡಿಕೊಂಡು, ಮನೆಕೆಲಸ, ಕಚೇರಿ ಕೆಲಸ ಮಾಡುತ್ತಿದ್ದಾರೆ. ಅಧಿಕ ಒತ್ತಡ ಎದುರಿಸುತ್ತಿದ್ದಾರೆ.
ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಮನೆಯಿಂದಲೇ ಕಚೇರಿ ಕೆಲಸ ಮಾಡುತ್ತಿದ್ದರಿಂದ ಮನೆಕೆಲಸದಲ್ಲಿ ಪುರುಷರ ಪಾತ್ರವೂ ಇತ್ತು. ಅನ್ ಲಾಕ್ ಆದಾಗಿನಿಂದ ಇದು ಕಡಿಮೆ ಆಗಿದ್ದು, ಮಹಿಳೆಯ ಮೇಲೆ ಹೆಚ್ಚಿನ ಹೊಣೆ ಬಿದ್ದಿದೆ.