ಗಂಟೆಗೊಮ್ಮೆ ಶೌಚಾಲಯಕ್ಕೆ ಹೋಗುವವರಿದ್ದಾರೆ. ಮೂತ್ರ ಅರ್ಜೆಂಟ್ ಆದಾಗ ಶೌಚಾಲಯಕ್ಕೆ ಹೋಗೊದನ್ನು ತಡೆದ್ರೆ ಏನಾಗುತ್ತದೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಮೂತ್ರ ಕಟ್ಟಿಕೊಂಡು ಕೆಲಸ ಮಾಡೋದು ಕಷ್ಟ. ಆದ್ರೆ ಚೀನಾದ ಕಂಪನಿಯೊಂದರ ಜನರು ಮೂತ್ರ ಕಟ್ಟಿಕೊಳ್ಳಲೇಬೇಕು. ಇಲ್ಲ ಅಂದ್ರೆ ದಂಡ ನೀಡಬೇಕು. ಕಂಪನಿ, ಉದ್ಯೋಗಿಗೆ ಒಮ್ಮೆ ಮಾತ್ರ ಶೌಚಾಲಯಕ್ಕೆ ಹೋಗಲು ಅನುಮತಿ ನೀಡುತ್ತದೆ.
ಅನ್ಪು ಎಲೆಕ್ಟ್ರಿಕ್ ಸೈನ್ಸ್ ಅಂಡ್ ಟೆಕ್ನಾಲಜಿ ಕಂಪನಿ ಈ ನಿಯಮವನ್ನು ಜಾರಿಗೆ ತಂದಿದೆ. ಇದು ಈಗ ಚರ್ಚೆಯ ವಿಷ್ಯವಾಗಿದೆ. ಒಮ್ಮೆ ಮಾತ್ರ ಉದ್ಯೋಗಿ ಶೌಚಾಲಯಕ್ಕೆ ಹೋಗಬಹುದು. ಎರಡನೇ ಬಾರಿ ಹೋಗಬೇಕೆಂದ್ರೆ 20 ಯುವಾನ್ ಅಂದ್ರೆ ಸುಮಾರು 220 ರೂಪಾಯಿ ಪಾವತಿಸಬೇಕು. ಸೋಮಾರಿ ಉದ್ಯೋಗಿಗಳು ಕೆಲಸದಿಂದ ತಪ್ಪಿಸಿಕೊಳ್ಳಲು ಶೌಚಾಲಯಕ್ಕೆ ಹೋಗ್ತಾರೆ. ಇದನ್ನು ತಪ್ಪಿಸಲು ಈ ನಿಯಮ ಜಾರಿಗೆ ತರಲಾಗಿದೆ ಎಂದು ಕಂಪನಿ ಹೇಳ್ತಿದೆ.
ಕಂಪನಿ ಉದ್ಯೋಗಿಗಳಿಗೆ ನೀಡಿದ ನೊಟೀಸನ್ನು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದ್ರ ಬಗ್ಗೆ ವಿರೋಧ ವ್ಯಕ್ತವಾಗ್ತಿದೆ. ಸಾಮಾಜಿಕ ಜಾಲತಾಣದಲ್ಲಿ ನೊಟೀಸ್ ವೈರಲ್ ಮಾಡಿ ಸುದ್ದಿ ಮಾಡಿದ ನಾಲ್ಕೈದು ಉದ್ಯೋಗಿಗಳನ್ನು ಕಂಪನಿ ವಜಾ ಮಾಡಿದೆ. ಒಂದಕ್ಕಿಂತ ಹೆಚ್ಚು ಬಾರಿ ಶೌಚಾಲಯಕ್ಕೆ ಹೋಗುವ ಉದ್ಯೋಗಿ ಬಾಸ್ ಗೆ ದಂಡ ನೀಡಬೇಕು.