ಅಮೆರಿಕಾದ ನ್ಯೂ ಮೆಕ್ಸಿಕೋದಲ್ಲಿರುವ ವೈಟ್ ಸ್ಯಾಂಡ್ಸ್ ನ್ಯಾಷನಲ್ ಪಾರ್ಕ್ ನಲ್ಲಿ ಸಾವಿರಾರು ವರ್ಷಗಳ ಹಿಂದಿನ ಮನುಷ್ಯರ ಹೆಜ್ಜೆ ಗುರುತು ಪತ್ತೆಯಾಗಿದೆ. ಹಿಮಯುಗದ ಹೆಜ್ಜೆಗುರುತುಗಳು ಇದ್ದರೂ ಇರಬಹುದು ಎನ್ನಲಾಗಿದೆ.
ಸುಮಾರು 11,000 ರಿಂದ 13,000 ವರ್ಷಗಳ ಹಿಂದಿನ ಹೆಜ್ಜೆ ಗುರುತುಗಳು ಇವಾಗಿರಬಹುದು ಎಂದು ಅಂದಾಜಿಸಿದ್ದು, ಆಗ ಈ ಪ್ರದೇಶವನ್ನು ಪ್ಲಾಯ ಎನ್ನುವ ಹೆಸರಿನಿಂದ ಕರೆಯಲಾಗುತ್ತಿತ್ತಂತೆ. ಅಂದರೆ, ಒಣಗಿದ ಅಂಗಳ ಅಥವಾ ಮೈದಾನದಂತಾದ ಕೆರೆಯ ಪ್ರದೇಶ ಎಂದರ್ಥ.
ಪ್ರಸ್ತುತ ನ್ಯಾಷನಲ್ ಪಾರ್ಕ್ ಇರುವ ಪ್ರದೇಶದಲ್ಲಿ ಸಿಬ್ಬಂದಿ ಗಸ್ತು ತಿರುಗುವಾಗ ಈ ವಿಚಿತ್ರ ಪಥ ಪತ್ತೆಯಾಗಿದೆ. ವಿಜ್ಞಾನಿಗಳು ಹೆಚ್ಚಿನ ಸಂಶೋಧನೆ ಕೈಗೊಂಡಾಗ ಇದು ಮನುಷ್ಯನ ಹೆಜ್ಜೆ ಗುರುತು ಎಂಬುದು ಪತ್ತೆಯಾಗಿದೆ. ಜೊತೆಗೆ ಪಳೆಯುಳಿಕೆಗಳೂ ಸಿಕ್ಕಿವೆ.
ಯಾವುದೋ ಮಹಿಳೆ ತನ್ನ ಮಗುವಿನೊಂದಿಗೆ ನಡೆದುಕೊಂಡು ಹೋಗಿರುವಂತೆ ಕೆಲವೆಡೆ ಇಬ್ಬರ ಹೆಜ್ಜೆ ಗುರುತುಗಳಿದ್ದು, ಅದು ಯುವಕನದ್ದೂ ಇರಬಹುದು ಎಂದು ಅಂದಾಜಿಸಲಾಗಿದೆ.
ಸಾಧಾರಣವಾಗಿ ಸೆಕೆಂಡಿಗೆ 1.2 ರಿಂದ 1.5 ಮೀಟರ್ ವೇಗದಲ್ಲಿ ನಡೆಯುತ್ತೇವೆ. ಆದರೆ, ಈ ಹೆಜ್ಜೆಗುರುತುಗಳು ಸೆಕೆಂಡಿಗೆ 1.7 ಮೀಟರ್ ನಷ್ಟು ವೇಗವಾಗಿ ಚಲಿಸಿದಂತಿದೆ. ಅಂದರೆ, ಯಾವುದೋ ಕಾರಣದಿಂದ ವೇಗವಾಗಿ ನಡೆದಾಡಿದಂತಿದೆ. ಇದಕ್ಕೆ ಕೆಟ್ಟ ವಾತಾವರಣವೂ ಕಾರಣವಿರಬಹುದು ಅಥವಾ ಅತಿವೃಷ್ಟಿ, ಜಲಪ್ರಳಯದಂತಹ ಪ್ರಕೃತಿ ವಿಕೋಪಕ್ಕೆ ಹೆದರಿ ಹೋದದ್ದೂ ಇರಬಹುದು.
ಎಲ್ಲಕ್ಕಿಂತ ಮಿಗಿಲಾಗಿ ದೈತ್ಯ ಪ್ರಾಣಿಗಳಾದ ಆನೆ, ಹುಲಿ, ಸಿಂಹ, ಚಿರತೆ, ತೋಳ, ಕಾಡೆಮ್ಮೆ, ಒಂಟೆ ಇತ್ಯಾದಿಗಳ ಬೇಟೆಯಾಡಲೂ ವೇಗದ ನಡಿಗೆ ಮಾಡಿರುವಂತಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.