ಎತ್ತದ ಮರವೊಂದರ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಲು ಒಂದಿಡೀ ಊರಿನ ಜನ ಕೈಹಾಕಿದ ಘಟನೆ ವೇಲ್ಸ್‌ನ ಸಣ್ಣ ಪಟ್ಟಣವೊಂದರಲ್ಲಿ ಜರುಗಿದೆ.
ಆಗ್ನೇಯ ವೇಲ್ಸ್‌ನಲ್ಲಿರುವ ಟ್ರೆಡ್‌ಗರ್ ಎಂಬ ಊರಿನ ನೂರಾರು ನಿವಾಸಿಗಳು ನಾಲ್ಕು ದಿನಗಳ ಕಾಲ ನಿರಂತರ ಪ್ರಯತ್ನ ಮಾಡಿದ್ದು, 40 ಅಡಿ ಎತ್ತರದ ಮರವೊಂದರ ಮೇಲೆ ಸಿಲುಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಿದ್ದಾರೆ. ಬೆಕ್ಕಿನ ಸುರಕ್ಷತೆಯ ಬಗ್ಗೆ ಕಳೆದ ಶನಿವಾರದಿಂದ ಇಡೀ ಊರೇ ಕಳಕಳಿ ತೋರುತ್ತಿತ್ತು.
ಈ ಊರಿನ ಮಹಿಳೆಯೊಬ್ಬರು ಬೆಳಗ್ಗಿನ ವಾಕಿಂಗ್‌ಗೆ ಹೊರಟಿದ್ದ ವೇಳೆ ಬೆಕ್ಕೊಂದರ ಅಳುವನ್ನು ಕೇಳಿದ್ದಾರೆ. ಎಲ್ಲಿದೆ ಎಂದು ಹುಡುಕಿದಾಗ ಬೆಕ್ಕು ಮರದ ಮೇಲೆ ಸಿಲುಕಿಕೊಂಡಿರುವುದು ಗೊತ್ತಾಗಿದೆ. ಕೂಡಲೇ ಆಕೆ ಪ್ರಾಣಿ ದಯಾ ಸಂಘಟನೆಗೆ ಸಂಪರ್ಕಿಸಿದ್ದಾರೆ.
ಬೆಕ್ಕಿನ ರಕ್ಷಣೆಗೆ ದಕ್ಷಿಣ ವೇಲ್ಸ್‌ನ ಅಗ್ನಿಶಾಮಕ ಸಿಬ್ಬಂದಿ ಬಂದು ಏಣಿಯೊಂದನ್ನು ಹಾಕುತ್ತಲೇ ಮರದ ಮೇಲಿದ್ದ ಬೆಕ್ಕು ಇನ್ನಷ್ಟು ಎತ್ತರಕ್ಕೆ ಏರಿದೆ. ಕೊನೆಗೆ ಈ ಎಲ್ಲಾ ಯತ್ನಗಳೂ ವಿಫಲವಾದ ಬಳಿಕ ಈ ಊರಿನ ಜನರ ಗುಂಪೊಂದು, ಹಲಗೆಗಳು ಹಾಗೂ ಕಬ್ಬಿಣದ ರಾಡುಗಳನ್ನು ಒಗ್ಗೂಡಿಸಿ ನಾಲ್ಕು ಅಂತಸ್ತಿನ ರಚನೆಯೊಂದನ್ನು ಮಾಡಿದ್ದಾರೆ. ಸಾಕಷ್ಟು ಹರಸಾಹಸದ ಬಳಿಕ ಬೆಕ್ಕನ್ನು ರಕ್ಷಿಸಿ, ಅದರ ಮಾಲೀಕರ ಬಳಿಗೆ ಸೇರಿಸಲಾಗಿದೆ.
https://www.facebook.com/apscaffoldingservices/posts/170756731310152