ಲಂಡನ್: ಇಚ್ಛಾ ಶಕ್ತಿ ಇದ್ದರೆ ಯಾವುದೇ ಕೊರತೆ ಅಡ್ಡಿ ಬಾರದು ಎಂಬುದಕ್ಕೆ ಈಕೆಯ ಕಾರ್ಯ ಸಾಕ್ಷಿ. ಈಕೆ ಗಟ್ಟಿಯಾಗಿ ಐದು ನಿಮಿಷ ನಡೆಯಲಾರಳು. ಊರುಗೋಲು ಹಿಡಿದು ನಿಲ್ಲಬೇಕು ದಿನದಿಂದ ದಿನಕ್ಕೆ ಆಕೆ ಕೃಶವಾಗುತ್ತಲೇ ಹೋಗುತ್ತಿದ್ದಾಳೆ. ಆದರೆ, 300 ಕಿಮೀ ಮ್ಯಾರಥಾನ್ ಚಾಲೆಂಜ್ ಸ್ವೀಕರಿಸಿ ಕಾರ್ಯಪ್ರವೃತ್ತಳಾಗಿದ್ದಾಳೆ.!
ಮಸಲ್ ಡಿಸ್ಟ್ರೋಫಿ ಎಂಬ ಅತಿ ವಿರಳ ಕಾಯಿಲೆಗೆ ತುತ್ತಾಗಿರುವ ಇಂಗ್ಲೆಂಡ್ ದೇಶದ ಕಾರ್ಮೆಲಾ ಚಿಲ್ಲೆರಿ ವ್ಯಾಟ್ಸನ್ ಎಂಬ ಬಾಲಕಿ ತನ್ನಂತೆ ಡಿಸ್ಟ್ರೋಫಿ ರೋಗ ಪೀಡಿತರ ಚಿಕಿತ್ಸೆಗೆ ಹಣ ಸಂಗ್ರಹಿಸಲು ಮ್ಯಾರಥಾನ್ ಚಾಲೆಂಜ್ ಸ್ವೀಕರಿಸಿದ್ದಾಳೆ. 30 ದಿನದಲ್ಲಿ 300 ಕಿಮೀ ಸಂಚರಿಸಿ 6 ಸಾವಿರ ಪೌಂಡ್(5.71ಲಕ್ಷ ಭಾರತೀಯ ರೂಪಾಯಿ)ಸಂಗ್ರಹಿಸುವ ಗುರಿ ಹೊಂದಿದ್ದಾಳೆ.
ಆಕೆ ಇದೇ ವಿಷಯಕ್ಕಾಗಿ ಒಂದು ಟ್ವಿಟರ್ ಪೇಜ್ ತೆರೆದಿದ್ದು, ತನ್ನ ಪ್ರತಿ ದಿನದ ಓಡಾಟದ ಮಾಹಿತಿ ನೀಡುತ್ತಿದ್ದಾಳೆ. ಆಕೆ ಮೂರು ಗಾಲಿ ಸೈಕಲ್ ಮೇಲೆ ತನ್ನ ಪುಟ್ಟ ನಾಯಿಯ ಜತೆ ಸಂಚರಿಸುತ್ತಿರುವ ವಿಡಿಯೋ ಅಪ್ಲೋಡ್ ಮಾಡಿದ್ದಾಳೆ.