ರೋಮ್: ವೈದ್ಯರು ಆಕೆಯ ತಲೆ ಬುರುಡೆಯನ್ನು ಶಸ್ತ್ರಚಿಕಿತ್ಸೆ ಮಾಡಿ ತೆರೆದು ಅಲ್ಲಿ ಬೆಳೆದಿದ್ದ ಗಡ್ಡೆ ತೆಗೆಯುತ್ತಿದ್ದರು. ಆದರೆ, ಆ ಆಪರೇಶನ್ ಮಾಡುತ್ತಿದ್ದ ಎರಡೂವರೆ ತಾಸಿನಲ್ಲಿ ಆಕೆ 90 ಆಲಿವ್ ಫಲಕ್ಕೆ ಮಾಂಸದ ಮಿಶ್ರಣ ತುಂಬಿ ತಿಂಡಿ ಸಿದ್ಧ ಮಾಡಿದ್ದಳು.
ಅಚ್ಚರಿಯಾದರೂ ಸತ್ಯ. ಇಟಲಿಯ ಅಬ್ರುಜ್ಜೋ ಪ್ರದೇಶದ 60 ವರ್ಷದ ಮಹಿಳೆ ಅಸ್ಕೊಲಿ ಸ್ಟೈಲೆ ಎಂಬ ಮಹಿಳೆ ತಮ್ಮ ಮಿದುಳಿನ ಶಸ್ತ್ರ ಚಿಕಿತ್ಸೆ ವೇಳೆ ಎಚ್ಚರಿದ್ದು ಅಚ್ಚರಿ ಮೂಡಿಸಿದ್ದಾರೆ.
ಆಕೆಯ ಮಿದುಳಿನ ಎಡ ಭಾಗದಲ್ಲಿ ಗಡ್ಡೆ ಬೆಳೆದಿತ್ತು. ಅದು ಭಾಷೆಯನ್ನು ನಿಯಂತ್ರಿಸುವ ಮಿದುಳಿನ ಭಾಗವಾಗಿದೆ. ಅದನ್ನು ತೆಗೆಯುವ ವೇಳೆ ವೈದ್ಯರು ಆಕೆಯ ಎಚ್ಚರ ತಪ್ಪಿಸದೇ ಹಾಗೇ ಇರಲು ಅವಕಾಶ ನೀಡಿದ್ದಾರೆ. ಒಲಿವ್ ಕಾಯಿಯೊಳಕ್ಕೆ ಮಾಂಸದ ತುಣುಕುಗಳನ್ನು ತುಂಬಿ ನಂತರ ಅದನ್ನು ಬ್ರೆಡ್ ಅಥವಾ ಚಪಾತಿಯಲ್ಲಿ ಸುತ್ತಿ ಬೇಯಿಸಲಾಗುತ್ತದೆ.
ಈ ತಿಂಡಿ ಮಾಡಲು ಬೇಕಾದ ಆಲಿವ್ ಕಾಯಿ ಹಾಗೂ ಇತರ ಸಾಮಗ್ರಿಗಳನ್ನು ಆಕೆ ಆಸ್ಪತ್ರೆಗೆ ತಂದಿದ್ದಳು ಎನ್ನಲಾಗಿದೆ.”ಆಕೆ ಈಗ ಗುಣಮುಖರಾಗಿದ್ದಾರೆ” ಎಂದು ವೈದ್ಯರು ತಿಳಿಸಿದ್ದಾರೆ. ಈ ರೀತಿ ಶಸ್ತ್ರಚಿಕಿತ್ಸೆ ವೇಳೆ ರೋಗಿ ಎಚ್ಚರಿರುವುದು ಇದೇ ಮೊದಲಲ್ಲ. ಇಂತಹ ಶಸ್ತ್ರ ಚಿಕಿತ್ಸೆ ವೇಳೆ ರೋಗಿ ಎಚ್ಚರವಿರಬೇಕಾದದ್ದು ಅಗತ್ಯವಾಗಿದೆ. ಇನ್ನೂ ಹಲವರಿಗೆ ಈ ರೀತಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.