ಜಪಾನ್ ನ ಮ್ಯೂಸಿಯಮ್ ಒಂದರಲ್ಲಿ ನಿಂಜಾ ಮಾದರಿಯ ಕಳ್ಳತನ ನಡೆದಿದ್ದು, ಕೇವಲ ಮೂರು ನಿಮಿಷದಲ್ಲಿ 10 ಲಕ್ಷ ಯೆನ್ (7 ಲಕ್ಷ ರೂಪಾಯಿ) ಕದ್ದೊಯ್ದಿದ್ದಾರೆ.
ನಿಂಜಾ ಎಂಬುದು ಜಪಾನ್ ನಲ್ಲಿ ಬಹಳ ಹಿಂದೆ ಇದ್ದ ಬುಡಕಟ್ಟು ಜನಾಂಗ. ಇವರ ವೇಗ, ನಿಗೂಢ ನಡೆ, ಕೌಶಲ್ಯ, ದೇಹದಾರ್ಢ್ಯತೆ, ಸಮರಕಲೆಗಳು ಎಲ್ಲರಿಗೂ ಒಲಿಯುವಂಥದ್ದಲ್ಲ.
ಇದೇ ಮಾದರಿಯನ್ನು ಬಳಸಿ ಇಗ ರಿಯು ಪ್ರದೇಶದಲ್ಲಿರುವ ನಿಂಜಾ ವಸ್ತು ಸಂಗ್ರಹಾಲಯವನ್ನು ದೋಚಲಾಗಿದೆ. ಇಲ್ಲದಿದ್ದರೆ, ಮೂರೇ ನಿಮಿಷದಲ್ಲಿ ಇಷ್ಟು ದೊಡ್ಡ ದರೋಡೆ ಸಾಧ್ಯವಿಲ್ಲ.
ಮ್ಯೂಸಿಯಮ್ ವರೆಗೆ ಕಾರೊಂದನ್ನು ತಳ್ಳಿಕೊಂಡು ಬಂದ ಮಂದಿ, ಅಲ್ಲಿಯೇ ನಿಲ್ಲಿಸಿಕೊಳ್ಳುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಾರಿನಿಂದ ಇಳಿದ ವ್ಯಕ್ತಿಯೊಬ್ಬ ಸಿಸಿಟಿವಿಯನ್ನು ನೆಲದ ಕಡೆಗೆ ತಿರುಗಿಸಿದ್ದು, ಯಾರ ಮುಖಚಹರೆಯೂ ಸ್ಪಷ್ಟವಾಗಿಲ್ಲ.
ಅವರ ಇಡೀ ಕಾರ್ಯಾಚರಣೆ ಸಂದರ್ಭದಲ್ಲಿ ಸಿಸಿಟಿವಿ ನೆಲ ನೋಡುತ್ತಿತ್ತು. ಭದ್ರತಾ ಸಿಬ್ಬಂದಿಯನ್ನೂ ಯಾಮಾರಿಸಿದ್ದಾರೆ. ಕಳ್ಳತನದ ನಂತರ ಕರಗಂಟೆ ಸದ್ದು ಮಾಡಿದ್ದು, ಬಂದು ನೋಡುವಷ್ಟರಲ್ಲಿ ದೋಚಿ ಹೋಗಿದ್ದರು.